
2010ರ ಸಾರಿಗೆ ಅಪಘಾತದ ನಕಲಿ ಪರಿಹಾರ ಪ್ರಕರಣ: ಎಸ್ಐಟಿ ತನಿಖೆಗೆ ಕರ್ನಾಟಕ ಹೈಕೋರ್ಟ್ ಆದೇಶ
ವಿಮಾ ಕಂಪನಿಯಿಂದ ಕಾನೂನುಬಾಹಿರವಾಗಿ ಪರಿಹಾರ ಪಡೆಯಲು 16 ವರ್ಷಗಳ ಹಳೆಯ ಅಪಘಾತ ಪ್ರಕರಣ ಒಂದರಲ್ಲಿ ಸಂಚು ರೂಪಿಸಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ, ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಿ ಹೊಸದಾಗಿ ತನಿಖೆ ನಡೆಸುವಂತೆ ಕರ್ನಾಟಕ ಹೈಕೋರ್ಟ್ನ ಧಾರವಾಡ ಪೀಠ ಆದೇಶಿಸಿದೆ. ಕೆಳಹಂತದ ಮೋಟಾರು ಅಪಘಾತ ಹಕ್ಕುಗಳ ನ್ಯಾಯಾಧಿಕರಣ (ಎಂಎಸಿಟಿ) ನೀಡಿದ್ದ ಆದೇಶವನ್ನು ಪ್ರಶ್ನಿಸಿ ಅರ್ಜಿದಾರ ಗಿರಿಧರ್ ನೀಲಕಂಠ ಪೈ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿ ಗೀತಾ ಕೆ.ಬಿ. ಅವರಿದ್ದ ಪೀಠ ಈ ತೀರ್ಪು ನೀಡಿದೆ.
2010ರ ಸೆಪ್ಟೆಂಬರ್ 15ರಂದು ಅಂಕೋಲಾ-ಕುಮಟಾ ರಸ್ತೆಯ ಶಿರೂರು ಗ್ರಾಮದ ಬಳಿ ತಮ್ಮ ತಂದೆಯವರ ಬೈಕ್ನಲ್ಲಿ ಹಿಂಬದಿ ಸವಾರನಾಗಿ ಪ್ರಯಾಣಿಸುತ್ತಿದ್ದಾಗ ಅಪಘಾತ ಸಂಭವಿಸಿ ತೀವ್ರ ಗಾಯಗೊಂಡಿದ್ದಾಗಿ ಗಿರಿಧರ್ ಪೈ ಪ್ರತಿಪಾದಿಸಿ ₹15 ಲಕ್ಷ ಪರಿಹಾರ ಕೋರಿದ್ದರು. ಆದರೆ ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಕಂಪನಿಯು ಈ ವಾಹನವನ್ನು ಸುಳ್ಳಾಗಿ ಸಿಲುಕಿಸಲಾಗಿದೆ ಎಂದು ವಾದಿಸಿತ್ತು. ವಿಚಾರಣೆ ವೇಳೆ, ಅಪಘಾತದ ಆರಂಭಿಕ ಪೊಲೀಸ್ ದೂರಿನಲ್ಲಿ ಗಿರಿಧರ್ ಪೈ ಅವರೇ ಬೈಕ್ ಚಲಾಯಿಸುತ್ತಿದ್ದರು ಎಂದು ನಮೂದಾಗಿದ್ದು, ನಂತರ ಅದನ್ನು ಬದಲಾಯಿಸಿರುವುದು ಕಂಡುಬಂದಿದೆ.
ಅರ್ಜಿದಾರ, ವಾಹನದ ಮಾಲೀಕ ಹಾಗೂ ದೂರುದಾರರು ಸೇರಿ ವಿಮಾ ಸಂಸ್ಥೆಗೆ ವಂಚಿಸಲು ಸಾಕ್ಷ್ಯಗಳನ್ನು ತಿರುಚಿದ್ದಾರೆ ಎಂಬುದು ಸ್ಪಷ್ಟವಾಗಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಹೀಗಾಗಿ ಮೇಲ್ಮನವಿಯನ್ನು ವಜಾಗೊಳಿಸಿದ ನ್ಯಾಯಪೀಠ, ಅರ್ಜಿದಾರರಿಗೆ ₹10,000 ದಂಡ ವಿಧಿಸಿದೆ. ಜೊತೆಗೆ ಪಶ್ಚಿಮ ವಲಯದ ಪೊಲೀಸ್ ಮಹಾಪರಿವೀಕ್ಷಕರಿಗೆ (ಐಜಿಪಿ) ಎಸ್ಐಟಿ ರಚಿಸಿ, ಮೂರು ತಿಂಗಳೊಳಗೆ ಸಮಗ್ರ ತನಿಖಾ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿದೆ.


