
25 ವರ್ಷಗಳಿಂದ ಐಪಿಎಸ್ ಅಧಿಕಾರಿ ಎಂದು ವಂಚಿಸುತ್ತಿದ್ದ ವ್ಯಕ್ತಿ ಮಂಗಳೂರು ಸಿಸಿಬಿ ಪೊಲೀಸರ ಬಲೆಗೆ
ಸುಮಾರು 25 ವರ್ಷಗಳಿಂದ ದೇಶದ ವಿವಿಧ ರಾಜ್ಯಗಳಲ್ಲಿ ಪೊಲೀಸ್ ಮತ್ತು ತನಿಖಾ ಸಂಸ್ಥೆಯ ಹಿರಿಯ ಅಧಿಕಾರಿ ಎಂದು ಸುಳ್ಳು ಗುರುತು ಹೇಳಿಕೊಂಡು ಜನರಿಗೆ ವಂಚಿಸುತ್ತಿದ್ದ 64 ವರ್ಷದ ಸ್ಯಾಮ್ ಪೀಟರ್ ಅಲಿಯಾಸ್ ಡ್ಯಾನಿ ತರಕನ್ ಎಂಬಾತನನ್ನು ಮಂಗಳೂರು ನಗರ ಸಿಸಿಬಿ ಪೊಲೀಸರು ಕೇರಳದ ಕಣ್ಣೂರಿನಲ್ಲಿ ಬಂಧಿಸಿದ್ದಾರೆ. ಆರೋಪಿಯು ಬ್ಯಾಂಕ್ ವಂಚನೆ, ತೆರಿಗೆ ವಂಚನೆ ಮತ್ತು ಹಣಕಾಸು ವಿವಾದಗಳಲ್ಲಿ ಸಿಲುಕಿದ್ದ ಜನರನ್ನು ಗುರಿಯಾಗಿಸಿಕೊಂಡು ಎನ್ಸಿಐಬಿ (NCIB) ಮತ್ತು ಎನ್ಐಎ ಅಧಿಕಾರಿ ಎಂದು ನಂಬಿಸಿ ಕೋಟ್ಯಂತರ ರೂಪಾಯಿ ಸುಲಿಗೆ ಮಾಡುತ್ತಿದ್ದನು.
2019ರಲ್ಲಿ ಮಂಗಳೂರು ಈಸ್ಟ್ ಪೊಲೀಸರಿಂದ ಬಂಧಿಸಲ್ಪಟ್ಟಿದ್ದ ಈತ, 2023ರ ಸೆಪ್ಟೆಂಬರ್ನಲ್ಲಿ ಜಾಮೀನು ಪಡೆದು ಪರಾರಿಯಾಗಿದ್ದನು. ಆತನ ವಿರುದ್ಧ ನ್ಯಾಯಾಲಯಗಳು ಹಲವು ಬಾರಿ ವಾರಂಟ್ ಹೊರಡಿಸಿದ್ದವು. ಕಾರ್ಯಾಚರಣೆ ನಡೆಸಿದ ಸಿಸಿಬಿ ತನಿಖಾ ತಂಡವು ಕಣ್ಣೂರಿನಲ್ಲಿ ಈತನನ್ನು ವಶಕ್ಕೆ ಪಡೆದಿದೆ.
ಆರೋಪಿಯ ವಿರುದ್ಧ ಕರ್ನಾಟಕ, ಕೇರಳ, ಮಹಾರಾಷ್ಟ್ರ, ಬಿಹಾರ, ಉತ್ತರ ಪ್ರದೇಶ ಸೇರಿದಂತೆ ದೇಶಾದ್ಯಂತ 17ಕ್ಕೂ ಹೆಚ್ಚು ವಂಚನೆ ಪ್ರಕರಣಗಳು ದಾಖಲಾಗಿವೆ. 2001ರಲ್ಲಿ ಈತನ ವಿರುದ್ಧ ಇಂಟರ್ಪೋಲ್ ರೆಡ್ ಕಾರ್ನರ್ ನೋಟಿಸ್ ಕೂಡ ಹೊರಡಿಸಲಾಗಿತ್ತು. ಇದೀಗ ಮಂಗಳೂರು ಸಿಸಿಬಿ ತಂಡವು ಈತನನ್ನು ಬಂಧಿಸಿದ್ದು, ಮುಂದಿನ ಕಾನೂನು ಕ್ರಮಕ್ಕಾಗಿ ಮಂಗಳೂರು ಪೂರ್ವ ಪೊಲೀಸ್ ಠಾಣೆಗೆ ಹಸ್ತಾಂತರಿಸಿದೆ.


