
ಆಲೂರು ತಾಲೂಕಿನ ಕೆ.ಹೊಸಕೋಟೆ ಭಾಗಕ್ಕೆ ನೂತನ ಕೆಎಸ್ಆರ್ಟಿಸಿ ಬಸ್ ಸೇವೆ ಚಾಲನೆ: ದಶಕಗಳ ಬೇಡಿಕೆ ಈಡೇರಿಕೆ
ಹಾಸನ ಜಿಲ್ಲೆಯ ಆಲೂರು ತಾಲೂಕಿನ ಕೆ.ಹೊಸಕೋಟೆ ಹೋಬಳಿಯ ಗ್ರಾಮೀಣ ಭಾಗದ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳ ದಶಕಗಳ ಬಸ್ ಸಾರಿಗೆ ಬೇಡಿಕೆ ಕೊನೆಗೂ ಈಡೇರಿದೆ. ಸಕಲೇಶಪುರ ಕ್ಷೇತ್ರದ ಶಾಸಕ ಸಿಮೆಂಟ್ ಮಂಜು ಅವರು ಕೆ.ಹೊಸಕೋಟೆಯಲ್ಲಿ ಹಸಿರು ನಿಶಾನೆ ತೋರಿಸುವ ಮೂಲಕ ನೂತನ ಕೆಎಸ್ಆರ್ಟಿಸಿ ಬಸ್ ಸಂಚಾರಕ್ಕೆ ಚಾಲನೆ ನೀಡಿದರು. ಈ ನೂತನ ಬಸ್ ಸೇವೆಯು ಕಿತ್ತಗೆರೆ, ಕಿತ್ತಗಳಲೆ, ಕೊಡಗಲವಾಡಿ, ಹೇರಗಳಲೆ ಹಾಗೂ ವಡೂರು ಸೇರಿದಂತೆ ಸುತ್ತಮುತ್ತಲಿನ ಹಲವು ಗ್ರಾಮಗಳಿಗೆ ಸಾರಿಗೆ ಸಂಪರ್ಕ ಕಲ್ಪಿಸಲಿದೆ.
ರಸ್ತೆ ಸಂಪರ್ಕವಿದ್ದರೂ ಇಷ್ಟು ವರ್ಷ ಸೂಕ್ತ ಬಸ್ ಸೌಲಭ್ಯವಿಲ್ಲದೆ ಗ್ರಾಮೀಣ ಭಾಗದ ಜನರು, ರೈತರು, ಕೂಲಿ ಕಾರ್ಮಿಕರು ಹಾಗೂ ರೋಗಿಗಳು ತೀವ್ರ ಸಂಕಷ್ಟ ಎದುರಿಸುತ್ತಿದ್ದರು. ವಿಶೇಷವಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಪ್ರತಿದಿನ 3 ರಿಂದ 5 ಕಿಲೋಮೀಟರ್ ನಡೆದುಕೊಂಡೇ ತೆರಳಬೇಕಾದ ಅನಿವಾರ್ಯತೆ ಇತ್ತು. ಸ್ಥಳೀಯರ ಸುದೀರ್ಘ ಮನವಿಗೆ ಸ್ಪಂದಿಸಿದ ಶಾಸಕರು, ಸಾರಿಗೆ ಇಲಾಖೆಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ನೂತನ ಮಾರ್ಗದಲ್ಲಿ ಬಸ್ ಸಂಚಾರ ಆರಂಭಿಸಲು ಕ್ರಮ ಕೈಗೊಂಡಿದ್ದಾರೆ.
ಈ ನೂತನ ಬಸ್ ಮಾರ್ಗವು ಸಕಲೇಶಪುರದಿಂದ ಹಾಲೇಬೇಲೂರು, ವಡೂರು, ಕಿತ್ತಗಳಲೆ, ಕೊಡಗಲವಾಡಿ, ಹೇರಗಳಲೆ, ಕಿತ್ತಗೆರೆ ಮಾರ್ಗವಾಗಿ ಕೆ.ಹೊಸಕೋಟೆ ಮೂಲಕ ಕೊಡ್ಲಿಪೇಟೆಗೆ ಸಂಪರ್ಕ ಕಲ್ಪಿಸಲಿದೆ. ಜೊತೆಗೆ ಬೆಂಗಳೂರಿಗೂ ನೇರ ಪ್ರಯಾಣಕ್ಕೆ ಅನುಕೂಲವಾಗಲಿದೆ. ಗ್ರಾಮಗಳಲ್ಲಿ ಬಸ್ ಸಂಚಾರ ಆರಂಭವಾಗುತ್ತಿದ್ದಂತೆ ಹರ್ಷ ವ್ಯಕ್ತಪಡಿಸಿದ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ನೂತನ ಬಸ್ನಲ್ಲಿ ಪ್ರಯಾಣಿಸಿ ಸಂಭ್ರಮಿಸಿದರು ಹಾಗೂ ಶಾಸಕರಿಗೆ ಸನ್ಮಾನಿಸಿದರು.


