
ಆರ್ಎಸ್ಎಸ್ ಪಥಸಂಚಲನ: ಯಾದಗಿರಿ ಶಿಕ್ಷಕರ ಅಮಾನತು ಆದೇಶಕ್ಕೆ ಕೆಎಸ್ಎಟಿ ತಡೆ
ಯಾದಗಿರಿ ಜಿಲ್ಲೆಯ ಇಬ್ಬರು ಸರ್ಕಾರಿ ಶಾಲಾ ಶಿಕ್ಷಕರಿಗೆ ಆಡಳಿತಾತ್ಮಕ ನ್ಯಾಯಮಂಡಳಿಯಿಂದ ಮಹತ್ವದ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಆರ್ಎಸ್ಎಸ್ ಪಥಸಂಚಲನದಲ್ಲಿ ಭಾಗವಹಿಸಿದ ಆರೋಪದ ಮೇಲೆ ಅಮಾನತುಗೊಂಡಿದ್ದ ಶಿಕ್ಷಕರ ಶಿಕ್ಷೆಗೆ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿಯ (ಕೆಎಸ್ಎಟಿ) ಕಲಬುರಗಿ ಪೀಠವು ತಡೆ ನೀಡಿದೆ. ಹುಣಸಗಿ ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಸಹಾಯಕ ಶಿಕ್ಷಕ ಗುರುರಾಜ್ ಜೋಶಿ ಹಾಗೂ ಸುರಪುರ ತಾಲೂಕಿನ ಕುಪ್ಪಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಅಣ್ಣಾಸಾಹೇಬ್ ದೇಶಮುಖ್ ಅವರಿಗೆ ಈ ತಡೆ ಆದೇಶದಿಂದ ತಾತ್ಕಾಲಿಕ ನೆರವು ಸಿಕ್ಕಂತಾಗಿದೆ.
ಕಳೆದ ವರ್ಷ ನಡೆದಿದ್ದ ಆರ್ಎಸ್ಎಸ್ ಕಾರ್ಯಕ್ರಮಗಳಲ್ಲಿ ಗಣವೇಷ ಧರಿಸಿ ಭಾಗವಹಿಸಿದ್ದ ಹಿನ್ನೆಲೆಯಲ್ಲಿ, ಕರ್ನಾಟಕ ನಾಗರಿಕ ಸೇವಾ (ನಡತೆ) ನಿಯಮಗಳು 2021ರ ನಿಬಂಧನೆಗಳನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ ಯಾದಗಿರಿ ಡಿಡಿಪಿಐ ಚನ್ನಬಸಪ್ಪ ಮುಧೋಳ ಅವರು ಆಗಸ್ಟ್ 20ರಂದು ಇಬ್ಬರೂ ಶಿಕ್ಷಕರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದರು. ಈ ಕ್ರಮವನ್ನು ಪ್ರಶ್ನಿಸಿ ಶಿಕ್ಷಕರು ಕೆಎಸ್ಎಟಿ ಮೆಟ್ಟಿಲೇರಿದ್ದರು. ಸಾರ್ವಜನಿಕ ರಜಾದಿನವಾದ ಭಾನುವಾರ ಶಾಲಾ ಅವಧಿಯ ಹೊರತಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದಾಗಿ ಅವರು ನ್ಯಾಯಮಂಡಳಿಗೆ ತಿಳಿಸಿದ್ದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಮಂಡಳಿಯು ಅಮಾನತು ಆದೇಶಕ್ಕೆ ತಡೆ ನೀಡಿ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 9ಕ್ಕೆ ಮುಂದೂಡಿದೆ. ಹುಣಸಗಿ ಮತ್ತು ಸುರಪುರ ತಾಲೂಕುಗಳ ಶೈಕ್ಷಣಿಕ ವಲಯದಲ್ಲಿ ಹಾಗೂ ಸ್ಥಳೀಯ ನಿವಾಸಿಗಳಲ್ಲಿ ಈ ಪ್ರಕರಣವು ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ನ್ಯಾಯಮಂಡಳಿಯ ಈ ಮಧ್ಯಂತರ ಆದೇಶವು ಸರ್ಕಾರಿ ನೌಕರರ ನಡಾವಳಿ ನಿಯಮಾವಳಿಗಳ ಸುತ್ತಲಿನ ಕಾನೂನು ಸಮರಕ್ಕೆ ಹೊಸ ತಿರುವು ನೀಡಿದೆ.


