
ಅಳ್ನಾವರ ತಾಲೂಕಿನಲ್ಲಿ ತೀವ್ರ ಮಳೆ ಅಭಾವ: ಬರಪೀಡಿತ ಪಟ್ಟಿಗೆ ಸೇರಿಸದಿರಲು ರೈತರ ಆಕ್ರೋಶ
ಧಾರವಾಡ ಜಿಲ್ಲೆಯ ಅಳ್ನಾವರ ತಾಲೂಕಿನಲ್ಲಿ ಮುಂಗಾರು ಮಳೆಯ ತೀವ್ರ ಕೊರತೆಯಾಗಿದ್ದರೂ, ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸದಿರುವುದಕ್ಕೆ ಸ್ಥಳೀಯ ರೈತರು ಮತ್ತು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹವಾಮಾನ ಮತ್ತು ಕೃಷಿ ಇಲಾಖೆಯ ಅಂಕಿಅಂಶಗಳ ಪ್ರಕಾರ, ಜೂನ್ನಿಂದ ಸೆಪ್ಟೆಂಬರ್ ಅವಧಿಯಲ್ಲಿ ಅಳ್ನಾವರ ತಾಲೂಕಿನಲ್ಲಿ 913.3 ಮಿಲಿಮೀಟರ್ ವಾಡಿಕೆ ಮಳೆಯಾಗಬೇಕಿತ್ತು. ಆದರೆ ಈ ಬಾರಿ ಕೇವಲ 415.2 ಮಿಲಿಮೀಟರ್ ಮಳೆಯಾಗಿದ್ದು, ಶೇಕಡಾ 50ಕ್ಕೂ ಹೆಚ್ಚು ಮಳೆ ಕೊರತೆಯಾಗಿದೆ.
ಅಳ್ನಾವರ ತಾಲೂಕಿನ ಪ್ರಮುಖ ಬೆಳೆಯಾದ ಭತ್ತ ಬೆಳೆಯಲು ಅಗತ್ಯ ನೀರಿಲ್ಲದೆ ರೈತರು ಕಂಗಾಲಾಗಿದ್ದಾರೆ. ಅನಿವಾರ್ಯವಾಗಿ ಭತ್ತದ ಬದಲಿಗೆ ಗೋವಿನ ಜೋಳ ಮತ್ತಿತರ ಪರ್ಯಾಯ ಬೆಳೆಗಳಿಗೆ ಮೊರೆ ಹೋಗಿದ್ದಾರೆ. ಮೇಲ್ನೋಟಕ್ಕೆ ಹೊಲಗಳು ಹಸಿರಾಗಿ ಕಂಡರೂ, ನೀರಿನ ಅಭಾವದಿಂದಾಗಿ ಪೈರುಗಳಲ್ಲಿ ಕಾಳು ಕಟ್ಟದೆ 'ಹಸಿ ಬರ' ಆವರಿಸಿದೆ. ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರು ತಾಲೂಕಿನ ಬೆಳೆ ಪರಿಸ್ಥಿತಿ ವೀಕ್ಷಿಸಿದ್ದರೂ, ಅಂತಿಮವಾಗಿ ಬಿಡುಗಡೆಯಾದ ಬರಪೀಡಿತ ತಾಲೂಕುಗಳ ಪಟ್ಟಿಯಿಂದ ಅಳ್ನಾವರ ತಾಲೂಕನ್ನು ಕೈಬಿಡಲಾಗಿದೆ ಎಂದು ರೈತರು ಅಸಮಾಧಾನ ಹೊರಹಾಕಿದ್ದಾರೆ.
ಇದಲ್ಲದೆ, ತಾಲೂಕಿನ ತಹಸೀಲ್ದಾರ್ ಹೂಗಾರ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ಹಾನಿ ಸಮೀಕ್ಷೆ ನಡೆಸಿಲ್ಲ ಮತ್ತು ರೈತರ ಕಷ್ಟ ಆಲಿಸಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ತಕ್ಷಣವೇ ಅಳ್ನಾವರ ತಾಲೂಕನ್ನು ಬರಪೀಡಿತ ಎಂದು ಘೋಷಿಸಿ ರೈತರಿಗೆ ಸೂಕ್ತ ಪರಿಹಾರ ಹಾಗೂ ಕೃಷಿ ನೆರವು ನೀಡದಿದ್ದರೆ ಮುಂಬರುವ ದಿನಗಳಲ್ಲಿ ತಾಲೂಕಿನಾದ್ಯಂತ ಉಗ್ರ ಪ್ರತಿಭಟನೆ ನಡೆಸುವುದಾಗಿ ರೈತ ಸಂಘಟನೆಗಳು ಎಚ್ಚರಿಕೆ ನೀಡಿವೆ.


