
ಅರಕಲಗೂಡು: ದೊಡ್ಡಹಳ್ಳಿ-ಅಗ್ರಹಾರ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎ. ಮಂಜು ಚಾಲನೆ
ಅರಕಲಗೂಡು ತಾಲೂಕಿನ ದೊಡ್ಡಮಗ್ಗೆ ಹೋಬಳಿಯ ದೊಡ್ಡಹಳ್ಳಿ-ಅಗ್ರಹಾರ ಮಾರ್ಗದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎ. ಮಂಜು ಇತ್ತೀಚೆಗೆ ಭೂಮಿಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಆದ್ಯತೆಯ ಮೇರೆಗೆ ಕಲ್ಪಿಸುವ ನಿಟ್ಟಿನಲ್ಲಿ ಈ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.
ಭೂಮಿಪೂಜೆ ನೆರವೇರಿಸಿದ ರಸ್ತೆ ಕಾಮಗಾರಿಯನ್ನು ನಿಗದಿತ ಮಾನದಂಡಗಳು ಹಾಗೂ ಗುಣಮಟ್ಟಕ್ಕೆ ತಕ್ಕಂತೆ ಪೂರ್ಣಗೊಳಿಸಬೇಕು ಎಂದು ಗುತ್ತಿಗೆದಾರರಿಗೆ ಖಡಕ್ ಸೂಚನೆ ನೀಡಿದರು. ಕಾಮಗಾರಿಯಲ್ಲಿ ಯಾವುದೇ ರೀತಿಯ ಲೋಪದೋಷಗಳು ಕಂಡುಬರಬಾರದು ಎಂದು ನಿರ್ದೇಶಿಸಿದರು. ಈ ರಸ್ತೆ ಅಭಿವೃದ್ಧಿಯಾಗುವುದರಿಂದ ದೊಡ್ಡಹಳ್ಳಿ ಮತ್ತು ಅಗ್ರಹಾರ ಭಾಗದ ಗ್ರಾಮಸ್ಥರು, ವಾಹನ ಸವಾರರು ಹಾಗೂ ಕೃಷಿ ಉತ್ಪನ್ನಗಳನ್ನು ಸಾಗಿಸುವ ರೈತರಿಗೆ ಸುಲಭ ಸಂಚಾರ ವ್ಯವಸ್ಥೆ ದೊರೆಯಲಿದೆ ಎಂದರು.
ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಉಳಿದಿರುವ ಮೂಲಸೌಕರ್ಯ ಅಗತ್ಯತೆಗಳನ್ನು ಹಂತ-ಹಂತವಾಗಿ ಈಡೇರಿಸಲು ಶ್ರಮಿಸುವುದಾಗಿ ಶಾಸಕರು ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ಸ್ಥಳೀಯ ಮುಖಂಡರಾದ ಎಂ.ಆರ್. ಮಂಜುನಾಥ್, ಸುರೇಶ್, ಬಾಲರಾಜ್, ಪ್ರಸಾದ್, ಶ್ರೀನಿವಾಸ್ ಸೇರಿದಂತೆ ಹಲವು ಗ್ರಾಮಸ್ಥರು ಉಪಸ್ಥಿತರಿದ್ದರು.


