
ಬಂಟ್ವಾಳ ತಾಲೂಕಿನಲ್ಲಿ 'ಪ್ರಜಾಸೇವಾ ಆಂದೋಲನ' ಆರಂಭ: ಪೊಲಾಲಿಯಲ್ಲಿ ಪ್ರಥಮ ಹೊಬಳಿ ಮಟ್ಟದ ಸಭೆ
ಬಂಟ್ವಾಳ ತಾಲೂಕು ಆಡಳಿತವು ರಾಜ್ಯವ್ಯಾಪಿ 'ಪ್ರಜಾಸೇವಾ ಆಂದೋಲನ' ಯೋಜನೆಯಡಿ ಸಾರ್ವಜನಿಕರ ಕುಂದುಕೊರತೆಗಳನ್ನು ಸ್ಥಳೀಯವಾಗಿಯೇ ಸ್ವೀಕರಿಸಿ ಇತ್ಯರ್ಥಪಡಿಸುವ ಪ್ರಮುಖ ಅಭಿಯಾನಕ್ಕೆ ಚಾಲನೆ ನೀಡಿದೆ. ತಾಲೂಕಿನ ಪ್ರಥಮ ಹೊಬಳಿ ಮಟ್ಟದ ಸಭೆಯನ್ನು ಕರಿಯಂಗಳ ಗ್ರಾಮದ ಪೊಲಾಲಿ ಶ್ರೀ ರಾಜರಾಜೇಶ್ವರಿ ಕ್ಷೇತ್ರದ ಸರ್ವಮಂಗಳ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಬಂಟ್ವಾಳ ತಹಶೀಲ್ದಾರ್ ಮಂಜುನಾಥ್, ಶಾಸಕ ರಾಜೇಶ್ ನಾಯ್ಕ್ ಅವರ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ವಿವಿಧ ತಾಲೂಕು ಮಟ್ಟದ ಇಲಾಖಾಧಿಕಾರಿಗಳು ನೇರವಾಗಿ ಭಾಗವಹಿಸಲಿದ್ದಾರೆ ಎಂದು ವಿವರಿಸಿದರು. ಈ ಆಂದೋಲನದ ಮೂಲಕ ಗ್ರಾಮಸ್ಥರು ರಸ್ತೆ, ಕುಡಿಯುವ ನೀರು, ಕಂದಾಯ, ಪಿಂಚಣಿ ಯೋಜನೆಗಳು ಹಾಗೂ ಮೂಲಸೌಕರ್ಯಗಳಿಗೆ ಸಂಬಂಧಿಸಿದ ದೂರುಗಳನ್ನು ನೇರವಾಗಿ ಅಧಿಕಾರಿಗಳ ಗಮನಕ್ಕೆ ತರಬಹುದಾಗಿದೆ.
ಸ್ಥಳದಲ್ಲೇ ಪರಿಹರಿಸಬಹುದಾದ ಅರ್ಜಿಗಳಿಗೆ ತಕ್ಷಣವೇ ಪರಿಹಾರ ಒದಗಿಸಲು ಆಡಳಿತ ಕ್ರಮ ಕೈಗೊಂಡಿದೆ. ಉಳಿದ ಅರ್ಜಿಗಳನ್ನು ಸಂಬಂಧಪಟ್ಟ ಇಲಾಖೆಗಳಿಗೆ ರವಾನಿಸಿ ಶೀಘ್ರ ವಿಲೇವಾರಿಗೆ ಸೂಚಿಸಲಾಗಿದೆ. ಮುಂಬರುವ ದಿನಗಳಲ್ಲಿ ಪ್ರತಿ ಶನಿವಾರ ವಿವಿಧ ಹೊಬಳಿಗಳಲ್ಲಿ ಹಾಗೂ ಪ್ರತಿ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರ ತಾಲೂಕು ಮಟ್ಟದಲ್ಲಿ ಪ್ರಜಾಸೇವಾ ಸಭೆಗಳನ್ನು ನಡೆಸಲು ನಿರ್ಧರಿಸಲಾಗಿದೆ. ಇದರಿಂದಾಗಿ ಸಾರ್ವಜನಿಕರು ಸಣ್ಣಪುಟ್ಟ ಕೆಲಸಗಳಿಗಾಗಿ ತಾಲೂಕು ಕೇಂದ್ರಕ್ಕೆ ಅಲೆಯುವುದು ತಪ್ಪಲಿದೆ.


