
ಬನಹಟ್ಟಿಯಲ್ಲೇ ಪ್ರಜಾಸೌಧ ನಿರ್ಮಾಣಕ್ಕೆ ಆಗ್ರಹಿಸಿ ಬಾಗಲಕೋಟೆಗೆ 90 ಕಿ.ಮೀ. ಬೃಹತ್ ಪಾದಯಾತ್ರೆ
ರಬಕವಿ ಬನಹಟ್ಟಿ ತಾಲೂಕಿನ ನೂತನ ಆಡಳಿತ ಕಚೇರಿ ಸಂಕೀರ್ಣ (ಪ್ರಜಾಸೌಧ) ನಿರ್ಮಾಣದ ಸ್ಥಳ ನಿಗದಿಗೆ ಸಂಬಂಧಿಸಿದಂತೆ ಹೋರಾಟ ತೀವ್ರಗೊಂಡಿದ್ದು, ಬನಹಟ್ಟಿ ನಗರ ಅಭಿವೃದ್ಧಿ ಸಮಿತಿ ಹಾಗೂ ಸ್ಥಳೀಯ ನಾಗರಿಕರು ಬನಹಟ್ಟಿಯಿಂದ ಬಾಗಲಕೋಟೆ ಜಿಲ್ಲಾಡಳಿತ ಭವನದವರೆಗೆ ಬೃಹತ್ 90 ಕಿಲೋಮೀಟರ್ ಪಾದಯಾತ್ರೆ ಪೂರ್ಣಗೊಳಿಸಿದ್ದಾರೆ. ಬನಹಟ್ಟಿ ನಗರದಲ್ಲಿ ಕಳೆದ 24 ದಿನಗಳಿಂದ ನಡೆಯುತ್ತಿದ್ದ ಸರದಿ ಸತ್ಯಾಗ್ರಹದ ನಂತರವೂ ಸ್ಪಷ್ಟ ತೀರ್ಮಾನವಾಗದ ಹಿನ್ನೆಲೆಯಲ್ಲಿ ಈ 'ಬಾಗಲಕೋಟೆ ಚಲೋ' ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಬನಹಟ್ಟಿಯ ಕಾಗವಾಡ-ಕಲಾದಗಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸಿಟಿಎಸ್ ನಂ. 8822ರ 3 ಎಕರೆ 25 ಗುಂಟೆ ಕಂದಾಯ ಜಮೀನಿನಲ್ಲೇ ಪ್ರಜಾಸೌಧ ನಿರ್ಮಿಸಬೇಕು ಎಂಬುದು ಹೋರಾಟಗಾರರ ಪ್ರಮುಖ ಬೇಡಿಕೆಯಾಗಿದೆ.
ಬಾಗಲಕೋಟೆಗೆ ಆಗಮಿಸಿದ ನೂರಾರು ಪ್ರತಿಭಟನಾಕಾರರು ಜಿಲ್ಲಾಡಳಿತ ಭವನದ ಪ್ರವೇಶ ದ್ವಾರದ ಬಳಿ ಧರಣಿ ನಡೆಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಆರಂಭದಲ್ಲಿ ಪೊಲೀಸರು ಭವನದ ಒಳಗೆ ಪ್ರವೇಶಿಸಲು ತಡೆ ಒಡ್ಡಿದ್ದರಿಂದ ಮುಖ್ಯ ದ್ವಾರದ ಬಳಿಯೇ ಪ್ರತಿಭಟನಾಕಾರರು ಕುಳಿತು ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ಹೋರಾಟ ಸಮಿತಿಯ ನಿಯೋಗವು ಬಾಗಲಕೋಟೆ ಜಿಲ್ಲಾಧಿಕಾರಿ ಸಂಗಪ್ಪ ಅವರನ್ನು ಭೇಟಿ ಮಾಡಿ ಬೇಡಿಕೆಗಳ ಮನವಿ ಪತ್ರ ಸಲ್ಲಿಸಿತು. ಬನಹಟ್ಟಿಯಲ್ಲಿ ಪ್ರಜಾಸೌಧ ನಿರ್ಮಿಸುವುದರಿಂದ ಸ್ಥಳೀಯ ನೇಕಾರರು, ರೈತರು ಹಾಗೂ ಸಾರ್ವಜನಿಕರಿಗೆ ಒಂದೇ ಸೂರಿನಡಿ ಸರ್ಕಾರಿ ಸೇವೆಗಳು ಲಭ್ಯವಾಗಲಿವೆ ಎಂದು ನಿಯೋಗದ ಮುಖಂಡರು ವಿವರಿಸಿದರು. ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಸಂಗಪ್ಪ ಅವರು, ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಪರಿಶೀಲಿಸುವುದಾಗಿ ಭರವಸೆ ನೀಡಿದರು. ಈ ಸುದೀರ್ಘ ಪಾದಯಾತ್ರೆಯು ರಬಕವಿ ಬನಹಟ್ಟಿ ತಾಲೂಕಿನಲ್ಲಿ ಸಾರ್ವಜನಿಕ ಸೌಲಭ್ಯ ಸ್ಥಾಪನೆಗೆ ಜನರ ಬದ್ಧತೆಯನ್ನು ತೋರಿಸಿದೆ.


