
ಬೆಂಗಳೂರಿನಲ್ಲಿ ಭಾರಿ ಪ್ರಮಾಣದ ಡ್ರಗ್ಸ್ ವಶ: ₹24.22 ಕೋಟಿ ಮೌಲ್ಯದ ಮಾದಕ ವಸ್ತು ಪತ್ತೆ, ಏಳು ಮಂದಿ ಬಂಧನ
ಬೆಂಗಳೂರು ನಗರದ ವಿವಿಧ ಭಾಗಗಳಲ್ಲಿ ಸರಣಿ ದಾಳಿ ನಡೆಸಿರುವ ನಗರ ಪೊಲೀಸರು, ಅಂದಾಜು ₹24.22 ಕೋಟಿ ಮೌಲ್ಯದ ಭಾರಿ ಪ್ರಮಾಣದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ಏಳು ಮಂದಿ ಡ್ರಗ್ ಪೆಡ್ಲರ್ಗಳನ್ನು ಬಂಧಿಸಿದ್ದಾರೆ. ದಕ್ಷಿಣ ವಿಭಾಗದ ವ್ಯಾಪ್ತಿಗೆ ಬರುವ ಗಿರಿನಗರ, ಇಂದಿರಾನಗರ, ಚಿಕ್ಕಜಾಲ ಹಾಗೂ ಗೋವಿಂದಪುರ ಪೊಲೀಸ್ ಠಾಣೆಗಳ ವಿಶೇಷ ತಂಡಗಳು ಈ ಜಂಟಿ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಿವೆ.
ಬಂಧಿತ ಆರೋಪಿಗಳಲ್ಲಿ ಒಬ್ಬ ವಿದೇಶಿ ಪ್ರಜೆ, ಹೊರರಾಜ್ಯದ ಐವರು ಹಾಗೂ ಸ್ಥಳೀಯ ನಿವಾಸಿಗಳು ಸೇರಿದ್ದಾರೆ. ವಿದೇಶಗಳಿಂದ ಹಾಗೂ ದೇಶದ ವಿವಿಧ ರಾಜ್ಯಗಳಿಂದ ಕಡಿಮೆ ಬೆಲೆಗೆ ನಿಷೇಧಿತ ಮಾದಕ ದ್ರವ್ಯಗಳನ್ನು ತರಿಸಿಕೊಳ್ಳುತ್ತಿದ್ದ ಈ ಜಾಲವು, ನಗರದ ಸಾರ್ವಜನಿಕರು ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿತ್ತು ಎಂಬುದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಕಾರ್ಯಾಚರಣೆ ವೇಳೆ 11.23 ಕೆಜಿ ಎಂಡಿಎಂಎ, 2.35 ಕೆಜಿ ಹೈಡ್ರೋ ಗಾಂಜಾ ಮತ್ತು 10 ಕೆಜಿ ಗಾಂಜಾ ಹಾಗೂ ಮೊಬೈಲ್ ಫೋನ್ಗಳನ್ನು ಜಪ್ತಿ ಮಾಡಲಾಗಿದೆ.
ನಗರದಲ್ಲಿ ಸಕ್ರಿಯವಾಗಿರುವ ಡ್ರಗ್ಸ್ ಜಾಲದ ಕುರಿತು ಲಭಿಸಿದ ಖಚಿತ ಮಾಹಿತಿ ಆಧರಿಸಿ ಈ ದಾಳಿ ನಡೆಸಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ. ಈ ಅಕ್ರಮ ಜಾಲದ ಹಿಂದೆ ಇರುವ ಮುಖ್ಯ ಸರಬರಾಜುದಾರರು ಹಾಗೂ ಹಣಕಾಸಿನ ವಹಿವಾಟಿನ ಮೂಲವನ್ನು ಪತ್ತೆಹಚ್ಚಲು ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.


