
ಬೆಂಗಳೂರಿನಲ್ಲಿ ಎಕ್ಸಾನ್ಮೊಬಿಲ್ ವಿಸ್ತರಣೆಗೆ ಚರ್ಚೆ ನಡೆಸಿದ ಕರ್ನಾಟಕ ಸರ್ಕಾರ
ಜಾಗತಿಕ ಇಂಧನ ದೈತ್ಯ ಎಕ್ಸಾನ್ಮೊಬಿಲ್ (ExxonMobil) ಸಂಸ್ಥೆಯ ಬೆಂಗಳೂರು ಘಟಕದ ವಿಸ್ತರಣೆ ಮತ್ತು ರಾಜ್ಯದ ನವೋದ್ಯಮಗಳ ಜೊತೆಗಿನ ಸಹಭಾಗಿತ್ವದ ಕುರಿತು ಕರ್ನಾಟಕ ಸರ್ಕಾರದ ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಂಸ್ಥೆಯ ಭಾರತೀಯ ವಿಭಾಗದ ಅಧ್ಯಕ್ಷ ಸ್ಕಾಟ್ ಸ್ಯಾಂಡ್ಲಿನ್ ಅವರೊಂದಿಗೆ ಬೆಂಗಳೂರಿನಲ್ಲಿ ಉನ್ನತ ಮಟ್ಟದ ಚರ್ಚೆ ನಡೆಸಿದ್ದಾರೆ.
ಈ ಸಭೆಯಲ್ಲಿ ಕೌಶಲ್ಯಾಭಿವೃದ್ಧಿ, ತಾಂತ್ರಿಕ ತರಬೇತಿ, ನವೋದ್ಯಮಗಳಿಗೆ ಜಂಟಿ ಇಂಕುಬೇಶನ್ ಬೆಂಬಲ ಹಾಗೂ ಹೊಸ ಆವಿಷ್ಕಾರದ ಸವಾಲುಗಳನ್ನು ಕೈಗೆತ್ತಿಕೊಳ್ಳುವ ಕುರಿತು ವಿವರವಾದ ಮಾತುಕತೆ ನಡೆಯಿತು. ಕಳೆದ ಮೂರು ದಶಕಗಳಿಂದ ಬೆಂಗಳೂರಿನಲ್ಲಿ ಸಕ್ರಿಯವಾಗಿರುವ ಎಕ್ಸಾನ್ಮೊಬಿಲ್, 2015 ರಲ್ಲಿ ಬೃಹತ್ ಸಂಶೋಧನೆ ಮತ್ತು ಅಭಿವೃದ್ಧಿ (R&D) ಕೇಂದ್ರವನ್ನು ನಗರದಲ್ಲಿ ಸ್ಥಾಪಿಸಿತ್ತು. ಈ ಕೇಂದ್ರದ ಮೂಲಸೌಕರ್ಯ ಹಾಗೂ ಕಾರ್ಯವ್ಯಾಪ್ತಿಯನ್ನು ಮತ್ತಷ್ಟು ಹಿಗ್ಗಿಸಲು ಸರ್ಕಾರ ಅಗತ್ಯ ಬೆಂಬಲ ನೀಡಲಿದೆ ಎಂದು ಸಚಿವರು ತಿಳಿಸಿದ್ದಾರೆ. ಈ ಸಹಭಾಗಿತ್ವವು ರಾಜ್ಯದ ಯುವ ತಂತ್ರಜ್ಞರಿಗೆ ಹಾಗೂ ಇಂಜಿನಿಯರಿಂಗ್ ಪದವೀಧರರಿಗೆ ಉನ್ನತ ಕೌಶಲ್ಯದ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ನೆರವಾಗಲಿದೆ.


