
ಬೆಂಗಳೂರಿನಲ್ಲಿ ಕಳಪೆ ಮತ್ತು 3.7 ಟನ್ ಅವಧಿ ಮೀರಿದ ಶಿಶು ಆಹಾರ ವಶಪಡಿಸಿಕೊಂಡ ಎಫ್ಎಸ್ಎಸ್ಎಐ; ನಾಶಕ್ಕೆ ಆದೇಶ
ಶಿಶುಗಳ ಪೋಷಕಾಂಶ ಹಾಗೂ ಆಹಾರ ಭದ್ರತೆಗೆ ಸಂಬಂಧಿಸಿದಂತೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಹಾಗೂ ಕರ್ನಾಟಕ ಆಹಾರ ಸುರಕ್ಷತಾ ಇಲಾಖೆಯು ಮಹತ್ವದ ಕ್ರಮ ಕೈಗೊಂಡಿದೆ. ಬೆಂಗಳೂರು ಮೂಲದ ‘ಬ್ರಿಟಿಷ್ ಲೈಫ್ಸೈನ್ಸಸ್ ಪ್ರೈವೇಟ್ ಲಿಮಿಟೆಡ್’ ಸಂಸ್ಥೆಯ ಮೇಲೆ ತಪಾಸಣೆ ನಡೆಸಿದ ಅಧಿಕಾರಿಗಳು, ಶಾಸನಬದ್ಧ ನಿಯಮಗಳನ್ನು ಪಾಲಿಸದ ಮತ್ತು ಕಳಪೆ ಮುದ್ರಣ ಹೊಂದಿದ್ದ ಬೃಹತ್ ಪ್ರಮಾಣದ ಶಿಶು ಆಹಾರ ಪದಾರ್ಥಗಳನ್ನು ವಶಪಡಿಸಿಕೊಂಡು ಸಂಸ್ಥೆಯ ವಿರುದ್ಧ ಕಾನೂನು ಕ್ರಮ ಆರಂಭಿಸಿದ್ದಾರೆ.
ವಿಶೇಷ ತಪಾಸಣೆ ವೇಳೆ ಸಂಸ್ಥೆಯ ಗೋದಾಮಿನಲ್ಲಿ 3.7 ಮೆಟ್ರಿಕ್ ಟನ್ನಷ್ಟು ಅವಧಿ ಮೀರಿದ ಶಿಶು ಆಹಾರ ಉತ್ಪನ್ನಗಳು ಪತ್ತೆಯಾಗಿದ್ದವು. ಈ ಉತ್ಪನ್ನಗಳು ಯಾವುದೇ ಕಾರಣಕ್ಕೂ ಮತ್ತೆ ಮಾರುಕಟ್ಟೆಗೆ ಸರಬರಾಜಾಗದಂತೆ ತಡೆಯಲು ನ್ಯಾಯಾಲಯದ ನಿರ್ದೇಶನದಂತೆ ಸಂಪೂರ್ಣ 3.7 ಟನ್ ದಾಸ್ತಾನನ್ನು ಸುರಕ್ಷಿತವಾಗಿ ನಾಶಪಡಿಸಲಾಗಿದೆ. ಸಣ್ಣ ಮಕ್ಕಳು ಹಾಗೂ ನವಜಾತ ಶಿಶುಗಳ ಆರೋಗ್ಯಕ್ಕೆ ಅಪಾಯವನ್ನುಂಟುಮಾಡುವ ಇಂತಹ ನಿಯಮ ಉಲ್ಲಂಘನೆಗಳನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಆಹಾರ ವ್ಯವಹಾರ ಸಂಸ್ಥೆಯ ವಿರುದ್ಧ ಸೂಕ್ತ ಕಾನೂನು ಪ್ರಕ್ರಿಯೆ ಮುಂದುವರಿದಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಈ ಕ್ರಮವು ರಾಜ್ಯಾದ್ಯಂತ ಆಹಾರ ಉದ್ಯಮದಲ್ಲಿ ನೈರ್ಮಲ್ಯ ಹಾಗೂ ಲೇಬಲಿಂಗ್ ಮಾನದಂಡಗಳ ಜಾರಿಗೆ ಕಟ್ಟುನಿಟ್ಟಿನ ಸಂದೇಶ ರವಾನಿಸಿದೆ.


