
ಬೆಂಗಳೂರಿನಲ್ಲಿ ಉನ್ನತ ಮಟ್ಟದ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಘಟಕ ಉದ್ಘಾಟಿಸಿದ ಸಿರ್ಮಾ ಎಸ್ಜಿಎಸ್ - ಎಲಿಮಾಸ್ಟರ್
ಕರ್ನಾಟಕದ ಹಾರ್ಡ್ವೇರ್ ಮತ್ತು ತಂತ್ರಜ್ಞಾನ ವಲಯಕ್ಕೆ ಪ್ರಮುಖ ಉತ್ತೇಜನ ನೀಡುವ ರೀತಿಯಲ್ಲಿ, ಭಾರತದ ಪ್ರಮುಖ ಸಿರ್ಮಾ ಎಸ್ಜಿಎಸ್ ಟೆಕ್ನಾಲಜಿ ಮತ್ತು ಇಟಲಿಯ ಎಲಿಮಾಸ್ಟರ್ ಗ್ರೂಪ್ ಸಂಸ್ಥೆಗಳು ಬೆಂಗಳೂರಿನಲ್ಲಿ ತಮ್ಮ ನೂತನ ಅತ್ಯಾಧುನಿಕ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಘಟಕವನ್ನು ಉದ್ಘಾಟಿಸಿವೆ. 'ಸಿರ್ಮಾ ಎಸ್ಜಿಎಸ್ ಎಲಿಮಾಸ್ಟರ್ ಪ್ರೈವೇಟ್ ಲಿಮಿಟೆಡ್' ಜಂಟಿ ಸಹಭಾಗಿತ್ವದಡಿ (60:40 ಅನುಪಾತ) ಈ ನೂತನ ಘಟಕವನ್ನು ಬೆಂಗಳೂರಿನ ಪ್ರಸಿದ್ಧ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿ ಸ್ಥಾಪಿಸಲಾಗಿದೆ.
ಸುಮಾರು 20,000 ಚದರ ಅಡಿ ವಿಸ್ತೀರ್ಣದಲ್ಲಿ ಹರಡಿರುವ ಈ ಆಧುನಿಕ ಕಾರ್ಖಾನೆಯು ಸುಧಾರಿತ ಸರ್ಫೇಸ್ ಮೌಂಟ್ ತಂತ್ರಜ್ಞಾನ (SMT), ಥ್ರೂ-ಹೋಲ್ ತಂತ್ರಜ್ಞಾನ (THT) ಹಾಗೂ ಬಾಕ್ಸ್-ಬಿಲ್ಡ್ ಜೋಡಣೆ ವ್ಯವಸ್ಥೆಗಳನ್ನು ಒಳಗೊಂಡಿದೆ. ವೈದ್ಯಕೀಯ ಉಪಕರಣಗಳು, ರೈಲ್ವೆ ತಂತ್ರಜ್ಞಾನ, ನವೀಕರಿಸಬಹುದಾದ ಇಂಧನ ಹಾಗೂ ಕೈಗಾರಿಕಾ ಯಾಂತ್ರೀಕರಣದಂತಹ ಪ್ರಮುಖ ವಲಯಗಳಿಗೆ ಅಗತ್ಯವಿರುವ ಉನ್ನತ ಮಟ್ಟದ ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನು ಇಲ್ಲಿ ಉತ್ಪಾದಿಸಲಾಗುತ್ತದೆ.
ಉದ್ಘಾಟನಾ ಸಮಾರಂಭದಲ್ಲಿ ಬೆಂಗಳೂರಿನ ಇಟಲಿ ಕಾನ್ಸುಲ್ ಜನರಲ್ ಡಾ. ಜಿಯಾಂಡೊಮೆನಿಕೋ ಮಿಲಾನೊ ಹಾಗೂ ಎರಡೂ ಸಂಸ್ಥೆಗಳ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಇಟಲಿಯ ಎಂಜಿನಿಯರಿಂಗ್ ವಿನ್ಯಾಸ ಕೌಶಲ್ಯ ಹಾಗೂ ಭಾರತದ ಪರಿಣಾಮಕಾರಿ ಉತ್ಪಾದನಾ ಕ್ಷಮತೆಯನ್ನು ಈ ಸಹಭಾಗಿತ್ವವು ಒಂದೇ ಸೂರಿನಡಿ ತಂದಿದೆ.
ಬೆಂಗಳೂರು ಕೇವಲ ಸಾಫ್ಟ್ವೇರ್ ಮತ್ತು ಐಟಿ ಸೇವೆಗಳಿಗೆ ಸೀಮಿತವಾಗದೆ, ಹಾರ್ಡ್ವೇರ್ ಹಾಗೂ ಮೂಲ ವಿನ್ಯಾಸ ಉತ್ಪಾದನಾ (ODM) ಕೇಂದ್ರವಾಗಿ ಬೆಳೆಯುತ್ತಿರುವುದಕ್ಕೆ ಈ ಯೋಜನೆಯು ಉದಾಹರಣೆಯಾಗಿದೆ. ಜಾಗತಿಕ ಪೂರೈಕೆ ಸರಪಳಿಯಲ್ಲಿ ಭಾರತದ ಪಾತ್ರವನ್ನು ಬಲಪಡಿಸಲು ಮತ್ತು ಭಾರತ-ಇಟಲಿ ನಡುವಿನ ಕೈಗಾರಿಕಾ ಬಾಂಧವ್ಯವನ್ನು ಹೆಚ್ಚಿಸಲು ಈ ನೂತನ ಉತ್ಪಾದನಾ ಘಟಕ ಸಹಕಾರಿಯಾಗಲಿದೆ.


