
ಚನ್ನಗಿರಿ: ಅಗಲಿದ ಶಿಕ್ಷಕ ಹೆಚ್.ಕೆ. ಮಂಜಪ್ಪ ಅವರ ಪತ್ನಿಗೆ ಶಿಕ್ಷಕರ ದಿನಾಚರಣೆಯಲ್ಲಿ ವಿಶೇಷ ಗೌರವ ಸನ್ಮಾನ
ಚನ್ನಗಿರಿ ತಾಲ್ಲೂಕು ಶಿಕ್ಷಣ ಇಲಾಖೆಯಿಂದ ನಗರದಲ್ಲಿ ಆಯೋಜಿಸಲಾಗಿದ್ದ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ, ಇತ್ತೀಚೆಗೆ ಬೈಕ್ ಅಪಘಾತದಲ್ಲಿ ಅಕಾಲಿಕವಾಗಿ ಅಗಲಿದ ಶಿಕ್ಷಕ ಹೆಚ್.ಕೆ. ಮಂಜಪ್ಪ ಅವರ ಕುಟುಂಬಕ್ಕೆ ಶಿಕ್ಷಣ ಇಲಾಖೆ ಹಾಗೂ ಸಾರ್ವಜನಿಕ ಪ್ರತಿನಿಧಿಗಳು ವಿಶೇಷ ಗೌರವ ಸಲ್ಲಿಸಿದರು. ಚನ್ನಗಿರಿ ತಾಲ್ಲೂಕಿನ ಅಮ್ಮನಗುಡ್ಡ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಂಜಪ್ಪ ಅವರು ಅಪಘಾತವೊಂದರಲ್ಲಿ ನಿಧನರಾಗಿದ್ದರು.
ಅವರ ಶೈಕ್ಷಣಿಕ ಸೇವೆ ಮತ್ತು ವಿದ್ಯಾರ್ಥಿಗಳ ಮೇಲಿನ ಕಾಳಜಿಯನ್ನು ಸ್ಮರಿಸಿ, ಶಿಕ್ಷಣ ಇಲಾಖೆಯ ವತಿಯಿಂದ ಅವರ ಪತ್ನಿ ಶ್ರೀಮತಿ ಹೆಚ್. ರಾಧಾ ಅವರನ್ನು ಶಿಕ್ಷಕರ ದಿನಾಚರಣೆಯ ವೇದಿಕೆಗೆ ಆಹ್ವಾನಿಸಿ ಗೌರವಿಸಲಾಯಿತು. ಸಮಾರಂಭದ ಮುಖ್ಯ ಅತಿಥಿಯಾಗಿದ್ದ ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ಅವರು ರಾಧಾ ಅವರಿಗೆ ಶಾಲು ಹೊದಿಸಿ, ಸ್ಮರಣಿಕೆ ಹಾಗೂ ಗೌರವ ಪತ್ರ ನೀಡಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಶಿವಗಂಗಾ ಬಸವರಾಜ್, ಸಮಾಜದ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಅಮ್ಮನಗುಡ್ಡ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸಿದ್ದ ಅಗಲಿದ ಶಿಕ್ಷಕ ಮಂಜಪ್ಪ ಅವರ ಸೇವೆಯನ್ನು ಸ್ಮರಿಸಿದ ಅವರು, ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಸರ್ಕಾರ ಹಾಗೂ ಶಿಕ್ಷಣ ಇಲಾಖೆಯ ನಿಯಮಾವಳಿಗಳಂತೆ ಸಿಗಬೇಕಾದ ಎಲ್ಲಾ ಸೌಲಭ್ಯಗಳನ್ನು ತಲುಪಿಸಲು ಸಹಕರಿಸಲಾಗುವುದು ಎಂದು ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ಚನ್ನಗಿರಿ ತಾಲ್ಲೂಕಿನ ಶಿಕ್ಷಣಾಧಿಕಾರಿಗಳು, ಶಾಲಾ ಮುಖ್ಯಸ್ಥರು, ಶಿಕ್ಷಕ ವೃಂದ ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.



Comments0
Loading comments…