
ಚಿಕ್ಕಬಳ್ಳಾಪುರ: 7ನೇ ತರಗತಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿನ್ನಡೆ, 180 ಸರ್ಕಾರಿ ಶಿಕ್ಷಕರಿಗೆ ಶೋಕಾಸ್ ನೋಟಿಸ್!
ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಆಡಳಿತಾತ್ಮಕ ಕ್ರಮ ಕೈಗೊಂಡಿದ್ದು, 180 ಸರ್ಕಾರಿ ಶಾಲಾ ಶಿಕ್ಷಕರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ. 7ನೇ ತರಗತಿಯ ಹಲವು ವಿದ್ಯಾರ್ಥಿಗಳಿಗೆ ಕನಿಷ್ಠ ಗಣಿತ ಲೆಕ್ಕಗಳನ್ನು ಮಾಡುವುದು ಹಾಗೂ ಕನ್ನಡ ವರ್ಣಮಾಲೆಯನ್ನು ಓದಲು ಮತ್ತು ಬರೆಯಲು ಬಾರದಿರುವುದು ಇಲಾಖೆಯ ಪರಿಶೀಲನೆ ವೇಳೆ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ.
ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ತಮ್ಮ ಕ್ಷೇತ್ರದ ಹಲವಾರು ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ದಿಢೀರ್ ಭೇಟಿ ನೀಡಿ ವಿದ್ಯಾರ್ಥಿಗಳ ಶೈಕ್ಷಣಿಕ ಮಟ್ಟವನ್ನು ಪರಿಶೀಲಿಸಿದ್ದರು. ಹಿರಿಯ ಪ್ರಾಥಮಿಕ ತರಗತಿ ಮಕ್ಕಳ ಕನಿಷ್ಠ ಕಲಿಕಾ ಮಟ್ಟ ಕುಸಿದಿರುವುದನ್ನು ಕಂಡು ಕಳವಳ ವ್ಯಕ್ತಪಡಿಸಿದ ಶಾಸಕರು, ಇಲಾಖಾ ಮಟ್ಟದಲ್ಲಿ ಸಮಗ್ರ ಮೌಲ್ಯಮಾಪನ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಅದರಂತೆ ಕ್ಷೇತ್ರ ಸಮನ್ವಯಾಧಿಕಾರಿಗಳು ಹಾಗೂ ಸಂಪನ್ಮೂಲ ವ್ಯಕ್ತಿಗಳ ತಂಡ ಚಿಕ್ಕಬಳ್ಳಾಪುರ ತಾಲೂಕಿನ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ವಿಶೇಷ ತಪಾಸಣೆ ನಡೆಸಿತ್ತು.
ಪರಿಶೀಲನೆ ವೇಳೆ ಹಲವು ಶಾಲೆಗಳಲ್ಲಿ ಕನಿಷ್ಠ ಕಲಿಕಾ ಮಟ್ಟಕ್ಕಿಂತ ಅತ್ಯಂತ ಹಿಂದುಳಿದಿರುವ ವಿದ್ಯಾರ್ಥಿಗಳನ್ನು ಗುರುತಿಸಲಾಯಿತು. ನಿಯಮಿತ ತರಗತಿಗಳನ್ನು ನಿರ್ವಹಿಸಿದರೂ ಮಕ್ಕಳು ಮೂಲಭೂತ ಶೈಕ್ಷಣಿಕ ಅರ್ಹತೆ ಪಡೆಯಲು ಏಕೆ ಸಾಧ್ಯವಾಗಿಲ್ಲ ಎಂಬುದರ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿಗಳು (ಬಿಇಒ) ಶಿಕ್ಷಕರಿಂದ ಸ್ಪಷ್ಟನೆ ಕೋರಿದ್ದಾರೆ. ನಿಗದಿತ ಅವಧಿಯಲ್ಲಿ ಸೂಕ್ತ ಸಮಜಾಯಿಷಿ ನೀಡದಿದ್ದಲ್ಲಿ ಇಲಾಖಾ ನಿಯಮಾವಳಿ ಪ್ರಕಾರ ಶಿಸ್ತುಕ್ರಮ ಜರುಗಿಸುವುದಾಗಿ ನೋಟಿಸ್ನಲ್ಲಿ ಎಚ್ಚರಿಸಲಾಗಿದೆ. ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಶಿಕ್ಷಣದ ಗುಣಮಟ್ಟ ಸುಧಾರಿಸಲು ಈ ಕ್ರಮ ಪ್ರಮುಖ ಹೆಜ್ಜೆಯಾಗಿದೆ.


