
ಚಿಕ್ಕಬಳ್ಳಾಪುರ: ಜಮೀನು ಖಾತೆಗಾಗಿ ₹6.5 ಲಕ್ಷ ಲಂಚ ಬೇಡಿಕೆ; ಲೋಕಾಯುಕ್ತ ಬಲೆಗೆ ಬಿದ್ದ ಗ್ರಾಮ ಆಡಳಿತಾಧಿಕಾರಿ
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನಲ್ಲಿ ಭ್ರಷ್ಟಾಚಾರ ವಿರುದ್ಧ ಲೋಕಾಯುಕ್ತ ಪೊಲೀಸರು ಪ್ರಮುಖ ಕಾರ್ಯಾಚರಣೆ ನಡೆಸಿದ್ದು, ಜಮೀನು ಖಾತೆ ಬದಲಾವಣೆಗೆ ₹6.5 ಲಕ್ಷ ಲಂಚ ಕೇಳಿದ್ದ ಗ್ರಾಮ ಆಡಳಿತಾಧಿಕಾರಿಯನ್ನು (ವಿಎಒ) ಬಲೆಗೆ ಬೀಳಿಸಿದ್ದಾರೆ. ಜಂಗಮಕೋಟೆ ಹೋಬಳಿಯ ಕಂದಾಯ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮೋಹನ್ ಕುಮಾರ್ ಬಂಧಿತ ಅಧಿಕಾರಿ.
ಸ್ಥಳೀಯ ರೈತರೊಬ್ಬರು ಜಂಗಮಕೋಟೆ ವ್ಯಾಪ್ತಿಯ ತಮ್ಮ ಜಮೀನಿನ ಖಾತೆ ಬದಲಾವಣೆಗಾಗಿ ಕಂದಾಯ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಕೆಲಸ ಮಾಡಿಕೊಡಲು ಅಧಿಕಾರಿ ಮೋಹನ್ ಕುಮಾರ್ ಸತತವಾಗಿ ವಿಳಂಬ ಮಾಡಿದ್ದಲ್ಲದೆ, ₹6.5 ಲಕ್ಷ ಲಂಚ ನೀಡುವಂತೆ ಪಟ್ಟು ಹಿಡಿದಿದ್ದರು. ಲಂಚ ನೀಡಲು ಇಷ್ಟವಿಲ್ಲದ ರೈತರು ಈ ಬಗ್ಗೆ ಚಿಕ್ಕಬಳ್ಳಾಪುರ ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ದೂರಿನ ಆಧಾರದ ಮೇಲೆ ಲೋಕಾಯುಕ್ತ ಎಸ್ಪಿ ಆಂಟೋನಿ ಜಾನ್ ಅವರ ಮಾರ್ಗದರ್ಶನದಲ್ಲಿ ದಾಳಿ ನಡೆಸಿದ ಪೊಲೀಸರು, ಅಧಿಕಾರಿಯನ್ನು ರೆಡ್ಹ್ಯಾಂಡಾಗಿ ಬಂಧಿಸಿದ್ದಾರೆ. ಆರೋಪಿ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಕಚೇರಿಯ ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ತಾಲೂಕಿನಾದ್ಯಂತ ಈ ಘಟನೆ ತೀವ್ರ ಸಂಚಲನ ಮೂಡಿಸಿದೆ.


