ಚಿಪ್ ವಿನ್ಯಾಸದಲ್ಲಿ ಕರ್ನಾಟಕ ದೇಶದಲ್ಲೇ ಅಗ್ರಸ್ಥಾನ: 73 ಟೇಪ್-ಔಟ್ಗಳ ದಾಖಲೆ ಎಂದ ಕೇಂದ್ರ ಸರ್ಕಾರ
ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ಬಿಡುಗಡೆ ಮಾಡಿರುವ ಹೊಸ ವರದಿಯ ಪ್ರಕಾರ, ಭಾರತದ ಸೆಮಿಕಂಡಕ್ಟರ್ ವಿನ್ಯಾಸ ಕ್ಷೇತ್ರದಲ್ಲಿ ಕರ್ನಾಟಕ ತನ್ನ ನಾಯಕತ್ವದ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದೆ. ದೇಶಾದ್ಯಂತ ಜಾರಿಯಲ್ಲಿರುವ 'ಚಿಪ್ಇನ್' (ChipIN) ಯೋಜನೆಯಡಿಯಲ್ಲಿ ಕರ್ನಾಟಕದ 81 ಸಂಸ್ಥೆಗಳಿಗೆ ಬೆಂಬಲ ಸಿಕ್ಕಿದ್ದು, ಒಟ್ಟು 73 ಚಿಪ್ ಟೇಪ್-ಔಟ್ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ಇದು ದೇಶದ ಯಾವುದೇ ರಾಜ್ಯಕ್ಕಿಂತ ಅತ್ಯಧಿಕ ಸಾಧನೆಯಾಗಿದೆ.
ಸಿ-ಡ್ಯಾಕ್ (C-DAC) ನಲ್ಲಿ ಸ್ಥಾಪಿಸಲಾದ ಚಿಪ್ಇನ್ ಕೇಂದ್ರವು ಉದಯೋನ್ಮುಖ ನವೋದ್ಯಮಗಳಿಗೆ ಹಾಗೂ ಶೈಕ್ಷಣಿಕ ಸಂಸ್ಥೆಗಳಿಗೆ ಎಲೆಕ್ಟ್ರಾನಿಕ್ ಡಿಸೈನ್ ಆಟೋಮೇಷನ್ (EDA) ಟೂಲ್ಸ್, ಹಾರ್ಡ್ವೇರ್ ಮೂಲಸೌಕರ್ಯ ಮತ್ತು ತಾಂತ್ರಿಕ ನೆರವನ್ನು ನೀಡುತ್ತದೆ. ಈ ಯೋಜನೆಯಲ್ಲಿ ಕರ್ನಾಟಕದ ಸಂಸ್ಥೆಗಳು ಬರೋಬ್ಬರಿ 88 ಲಕ್ಷ ಗಂಟೆಗಳ ಕಾಲ ಇಡಿಎ ಟೂಲ್ಸ್ಗಳನ್ನು ಬಳಕೆ ಮಾಡಿದ್ದು, ರಾಜ್ಯದಲ್ಲಿ ನಡೆಯುತ್ತಿರುವ ಆಳವಾದ ಸಂಶೋಧನೆಯನ್ನು ಪ್ರದರ್ಶಿಸುತ್ತದೆ. ಈ ಪಟ್ಟಿಯಲ್ಲಿ ತಮಿಳುನಾಡು 33 ಟೇಪ್-ಔಟ್ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ತೆಲಂಗಾಣ 28 ಟೇಪ್-ಔಟ್ಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.
ಕೇಂದ್ರ ಸರ್ಕಾರದ 'ಚಿಪ್ಸ್ ಟು ಸ್ಟಾರ್ಟ್-ಅಪ್' (C2S) ಮತ್ತು 'ಡಿಸೈನ್ ಲಿಂಕ್ಡ್ ಇನ್ಸೆಂಟಿವ್' (DLI) ಯೋಜನೆಗಳ ನೆರವಿನೊಂದಿಗೆ ರಾಜ್ಯದಲ್ಲಿ ಚಿಪ್ ವಿನ್ಯಾಸ ಕ್ಷೇತ್ರಕ್ಕೆ ಹೊಸ ಬಲ ಸಿಕ್ಕಿದೆ. ಇತ್ತೀಚೆಗೆ ಕೇಂದ್ರ ಸಂಪುಟವು ₹1,27,500 ಕೋಟಿ ವೆಚ್ಚದ 'ಸೆಮಿಕಾನ್ 2.0' ಯೋಜನೆಗೆ ಅನುಮೋದನೆ ನೀಡಿರುವುದರಿಂದ, ಚಿಪ್ ವಿನ್ಯಾಸದಲ್ಲಿ ಕರ್ನಾಟಕ ಹೊಂದಿರುವ ಈ ಸಾಮರ್ಥ್ಯವು ಭಾರತವನ್ನು ಸ್ವಾವಲಂಬಿ ಸೆಮಿಕಂಡಕ್ಟರ್ ಹಬ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ.


