
ದಾರಿ ತಪ್ಪಿಸುವ ‘ಟಿಪ್ಪಿಂಗ್’ ಮತ್ತು ‘ಡಾರ್ಕ್ ಪ್ಯಾಟರ್ನ್’ ಬಳಕೆ: ರ್ಯಾಪಿಡೋ ಸಂಸ್ಥೆಗೆ ₹10 ಲಕ್ಷ ದಂಡ ವಿಧಿಸಿದ CCPA
ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಬೈಕ್ ಹಾಗೂ ಕ್ಯಾಬ್ ಅಗ್ರಿಗೇಟರ್ ಆಪ್ಗಳ ಪ್ರಿ-ರೈಡ್ ಟಿಪ್ಪಿಂಗ್ ಮತ್ತು ಡೈನಾಮಿಕ್ ದರ ನಿಯಮಗಳ ಕುರಿತು ಸಮಗ್ರ ಪರಿಶೀಲನೆ ನಡೆಸಿದ್ದ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರವು (ಸಿಸಿಪಿಎ), ರ್ಯಾಪಿಡೋ ಆಪ್ ನಿರ್ವಹಿಸುವ ರೊಪ್ಪೆನ್ ಟ್ರಾನ್ಸ್ಪೋರ್ಟೇಷನ್ ಸರ್ವಿಸಸ್ ಸಂಸ್ಥೆಗೆ ₹10 ಲಕ್ಷ ದಂಡ ವಿಧಿಸಿದೆ. ಗ್ರಾಹಕರಿಗೆ ಸವಾರಿ ಖಚಿತಪಡಿಸುವ ಮುನ್ನವೇ ಹೆಚ್ಚಿನ ದರ ಪಾವತಿಸುವಂತೆ ಒತ್ತಡ ಹೇರುವುದು ಹಾಗೂ ದಾರಿ ತಪ್ಪಿಸುವ ತಂತ್ರಗಳನ್ನು ಬಳಸಿದ್ದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ.
ಗ್ರಾಹಕರು ರೈಡ್ ಬುಕ್ ಮಾಡುವಾಗ 'ಹೆಚ್ಚಿನ ದರ ನೀಡಿದರೆ ಸವಾರಿ ಸಿಗುವ ಸಾಧ್ಯತೆ ಹೆಚ್ಚು' ಹಾಗೂ ಚಾಲಕರು ಒಪ್ಪಿಕೊಳ್ಳದಿದ್ದಲ್ಲಿ ಹೆಚ್ಚಿನ ಹಣ ಸೇರಿಸುವಂತೆ ಸೂಚಿಸುವ ಸಂದೇಶಗಳು ಆಪ್ನಲ್ಲಿ ಮೂಡುತ್ತಿದ್ದವು. ಇದು ಗ್ರಾಹಕರನ್ನು ಮಾನಸಿಕವಾಗಿ ಪ್ರಭಾವಿಸಿ ಹೆಚ್ಚಿನ ದರ ಪಾವತಿಸುವಂತೆ ಮಾಡುವ 'ಡಾರ್ಕ್ ಪ್ಯಾಟರ್ನ್' ಮತ್ತು 'ಕನ್ಫರ್ಮ್ ಶೇಮಿಂಗ್' ನಿಯಮಗಳ ಉಲ್ಲಂಘನೆಯಾಗಿದೆ ಎಂದು ಪ್ರಾಧಿಕಾರ ಸ್ಪಷ್ಟಪಡಿಸಿದೆ. ಈ ಹಿನ್ನೆಲೆಯಲ್ಲಿ ಇಂತಹ ದಾರಿ ತಪ್ಪಿಸುವ ಆಪ್ ವಿನ್ಯಾಸಗಳು ಹಾಗೂ ಪ್ರಾಂಪ್ಟ್ಗಳನ್ನು ತಕ್ಷಣವೇ ಸ್ಥಗಿತಗೊಳಿಸುವಂತೆ ಸಿಸಿಪಿಎ ರ್ಯಾಪಿಡೋ ಸಂಸ್ಥೆಗೆ ಆದೇಶಿಸಿದೆ.


