
ದೊಡ್ಡಬಳ್ಳಾಪುರದ ಆತ್ರೇಯ ಆಯುರ್ವೇದ ಕಾಲೇಜು ಸೀಜ್: ನೂರಾರು ವಿದ್ಯಾರ್ಥಿಗಳ ಭವಿಷ್ಯ ಅತಂತ್ರ, ಅಹೋರಾತ್ರಿ ಧರಣಿ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಕೊಡಿಗೆಹಳ್ಳಿ ಬಳಿ ಇರುವ ಆತ್ರೇಯ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರಕ್ಕೆ ಬ್ಯಾಂಕ್ ಅಧಿಕಾರಿಗಳು ಬೀಗ ಮುದ್ರೆ ಹಾಕಿದ್ದು, ನೂರಾರು ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ಅತಂತ್ರವಾಗಿದೆ. ಕಾಲೇಜು ಆಡಳಿತ ಮಂಡಳಿಯು ಬ್ಯಾಂಕ್ ಸಾಲ ಮರುಪಾವತಿಸದ ಹಿನ್ನೆಲೆಯಲ್ಲಿ ಸಿಟಿ ಯೂನಿಯನ್ ಬ್ಯಾಂಕ್ ಆಸ್ತಿಯನ್ನು ವಶಕ್ಕೆ ಪಡೆದು ಕ್ಯಾಂಪಸ್ ಅನ್ನು ಸೀಜ್ ಮಾಡಿದೆ. ಇದರಿಂದಾಗಿ ಕಳೆದ ಎರಡು ತಿಂಗಳಿನಿಂದ ಶೈಕ್ಷಣಿಕ ಹಾಗೂ ಆಸ್ಪತ್ರೆ ಚಟುವಟಿಕೆಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ.
ರಾಜ್ಯದ ನಾನಾ ಭಾಗಗಳಿಂದ ಆಗಮಿಸಿ ಆಯುರ್ವೇದ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಾಲೇಜು ಮುಚ್ಚಲ್ಪಟ್ಟಿದ್ದರೂ ಆಡಳಿತ ಮಂಡಳಿಯು ಕೇವಲ ಹೆಸರಿಗೆ ಆನ್ಲೈನ್ ತರಗತಿಗಳನ್ನು ನಡೆಸಿ ಮುಂದಿನ ಕಂತಿನ ಶುಲ್ಕ ಪಾವತಿಸುವಂತೆ ಒತ್ತಾಯಿಸುತ್ತಿದೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ವಿದ್ಯಾರ್ಥಿಗಳು, ಪೋಷಕರು ಹಾಗೂ ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ದೇವನಹಳ್ಳಿಯಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಮುಂಭಾಗ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಆರಂಭಿಸಿದ್ದಾರೆ.
ಸರ್ಕಾರ ಹಾಗೂ ಜಿಲ್ಲಾಡಳಿತ ತಕ್ಷಣವೇ ಮಧ್ಯಪ್ರವೇಶಿಸಿ ಆತ್ರೇಯ ಕಾಲೇಜಿನ ವಿದ್ಯಾರ್ಥಿಗಳಿಗೆ ರಾಜ್ಯದ ಇತರೆ ಆಯುರ್ವೇದ ಕಾಲೇಜುಗಳಲ್ಲಿ ಪರ್ಯಾಯ ವ್ಯಾಸಂಗಕ್ಕೆ ವ್ಯವಸ್ಥೆ ಕಲ್ಪಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ಶೈಕ್ಷಣಿಕ ವಲಯದಲ್ಲಿ ಈ ಘಟನೆ ದೊಡ್ಡ ಕಳವಳಕ್ಕೆ ಕಾರಣವಾಗಿದ್ದು, ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲುಸ್ತುವಾರಿಯನ್ನು ಬಿಗಿಗೊಳಿಸುವ ಅಗತ್ಯವನ್ನು ಎತ್ತಿಹಿಡಿದಿದೆ.


