
ಎಲ್ಎಲ್ಸಿ ಕಾಲುವೆ ನೀರಿಗಾಗಿ ಕಂಪ್ಲಿಯಲ್ಲಿ ರೈತರ ಬೃಹತ್ ಪಾದಯಾತ್ರೆ: ಅಧಿಕಾರಿಗಳಿಗೆ ತರಾಟೆ
ಕಂಪ್ಲಿ ತಾಲೂಕಿನ ಎಮ್ಮಿಗನೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರು ತುಂಗಭದ್ರಾ ಎಲ್ಎಲ್ಸಿ (ಲೋ ಲೆವೆಲ್) ಕಾಲುವೆಗೆ ಸಮರ್ಪಕವಾಗಿ ನೀರು ಹರಿಸುವಂತೆ ಆಗ್ರಹಿಸಿ ಕಂಪ್ಲಿ ಪಟ್ಟಣದ ನೀರಾವರಿ ಇಲಾಖೆ ಕಚೇರಿಗೆ ಬೃಹತ್ ಪಾದಯಾತ್ರೆ ನಡೆಸಿದರು. ಎಮ್ಮಿಗನೂರಿನ ಶ್ರೀ ಜಡಿತಾತ ದೇವಸ್ಥಾನದಿಂದ ಆರಂಭವಾದ ಈ ಪಾದಯಾತ್ರೆಯು ನೀರಾವರಿ ಇಲಾಖೆಯ ಕಚೇರಿ ಮುಂಭಾಗ ತಲುಪಿ, ಅಲ್ಲಿ ರೈತರು ಬೃಹತ್ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ರೈತರು ನೀರಾವರಿ ಇಲಾಖೆ ಅಧಿಕಾರಿ ಶ್ರೀನಿವಾಸ್ ಅವರನ್ನು ತರಾಟೆಗೆ ತೆಗೆದುಕೊಂಡರು. ಕಾಲುವೆಯ ಮೇಲ್ಭಾಗದಲ್ಲಿ ಕೆಲ ರೈತರು ಅಕ್ರಮವಾಗಿ ಬೃಹತ್ ಪೈಪ್ಲೈನ್ಗಳನ್ನು ಅಳವಡಿಸಿಕೊಂಡು ನೀರು ಪಡೆಯುತ್ತಿರುವುದರಿಂದ, ಕೆಳಮಟ್ಟದ ಜಮೀನುಗಳಿಗೆ ನೀರು ತಲುಪುತ್ತಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು. ತುಂಗಭದ್ರಾ ಜಲಾಶಯ ಭರ್ತಿಯಾಗಿದ್ದರೂ, ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಸಮರ್ಪಕ ನೀರು ನಿರ್ವಹಣೆಯ ಕೊರತೆಯಿಂದಾಗಿ ಕೊನೆಯ ಭಾಗದ ಭತ್ತದ ಬೆಳೆಗಳು ಒಣಗುವ ಹಂತ ತಲುಪಿವೆ ಎಂದು ದೂರಿದರು.
ರೈತ ಮುಖಂಡರಾದ ಕೊಟ್ಟೂರು ರಾಮಣ್ಣ, ಕಾಗೆ ಈರಣ್ಣ, ಖಾಸೀಮ್ ಸಾಬ್, ಸುಮಂತ್ ಸೇರಿದಂತೆ ಹಲವು ಮುಖಂಡರು ಕಾಲುವೆಯ ಅಕ್ರಮ ನೀರು ಬಳಕೆ ತಡೆದು ತಕ್ಷಣವೇ ಕೆಳಮಟ್ಟದ ಭಾಗಗಳಿಗೆ ನೀರು ಪೂರೈಸಬೇಕೆಂದು ಒತ್ತಾಯಿಸಿದರು. ಕಂಪ್ಲಿ ತಾಲೂಕಿನ ರೈತರ ಜೀವನಾಡಿಯಾಗಿರುವ ಕಾಲುವೆ ನೀರು ಸಿಗದಿರುವುದು ಅವರ ಆರ್ಥಿಕ ಪರಿಸ್ಥಿತಿಯ ಮೇಲೆ ತೀವ್ರ ಪರಿಣಾಮ ಬೀರಿದೆ. ಅಧಿಕಾರಿಗಳು ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.


