
ಗಂಗನಹಳ್ಳಿ ತೋಟದಲ್ಲಿ ಹೂವಿನ ಬೆಳೆ ರಕ್ಷಣಾ ಕವರ್ ಕತ್ತರಿಸಿದ ದುಷ್ಕರ್ಮಿಗಳು: ರೈತನ ಆತಂಕ
ಶಿಡ್ಲಘಟ್ಟ ತಾಲೂಕಿನ ಮೇಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಂಗನಹಳ್ಳಿ ಗ್ರಾಮದಲ್ಲಿ ರೈತರೊಬ್ಬರ ಹೂವಿನ ತೋಟಕ್ಕೆ ದುಷ್ಕರ್ಮಿಗಳು ನುಗ್ಗಿ, ಬೆಳೆ ರಕ್ಷಣೆಗಾಗಿ ಅಳವಡಿಸಿದ್ದ ರಕ್ಷಣಾ ಕವರ್ಗಳನ್ನು ಕತ್ತರಿಸಿ ಹಾಕಿರುವ ಕೃತ್ಯ ಬೆಳಕಿಗೆ ಬಂದಿದೆ. ಗ್ರಾಮದ ಯುವ ರೈತ ಜಿ.ಎಂ. ಸುಧಾಕರ್ ತಮ್ಮ ಜಮೀನಿನಲ್ಲಿ ಶೇಡ್ನೆಟ್ ಮಾದರಿಯಲ್ಲಿ "ಬಿ" ವೈಟ್ ತಳಿಯ ಹೂವಿನ ಬೆಳೆಯನ್ನು ಬೆಳೆದಿದ್ದರು.
ಮಳೆಯಿಂದ ಹೂವಿನ ಬೆಳೆಯನ್ನು ರಕ್ಷಿಸುವ ಹಿತದೃಷ್ಟಿಯಿಂದ ಸುಧಾಕರ್ ಅವರು ಸುಮಾರು ₹50,000 ವೆಚ್ಚ ಮಾಡಿ ತೋಟದ ಸಾಲುಗಳಿಗೆ ಪ್ಲಾಸ್ಟಿಕ್ ಹಾಗೂ ಶೇಡ್ನೆಟ್ ಕವರ್ಗಳನ್ನು ಅಳವಡಿಸಿದ್ದರು. ಬುಧವಾರ ರಾತ್ರಿ ತೋಟಕ್ಕೆ ನುಗ್ಗಿದ ಕಿಡಿಗೇಡಿಗಳು 10ಕ್ಕೂ ಹೆಚ್ಚು ಸಾಲುಗಳ ರಕ್ಷಣಾ ಕವರ್ಗಳನ್ನು ಸಂಪೂರ್ಣವಾಗಿ ಕತ್ತರಿಸಿ ತುಂಡು ಮಾಡಿದ್ದಾರೆ.
ಘಟನೆ ನಡೆದ ರಾತ್ರಿ ಅದೃಷ್ಟವಶಾತ್ ಭಾರಿ ಮಳೆ ಬಾರದ ಕಾರಣ ಕಟಾವಿಗೆ ಬಂದಿದ್ದ ಹೂವಿನ ಬೆಳೆಗೆ ತಕ್ಷಣದ ದೊಡ್ಡ ಮಟ್ಟದ ಅನಾಹುತ ತಪ್ಪಿದೆ. ಒಂದು ವೇಳೆ ಭಾರಿ ಮಳೆ ಬಿದ್ದಿದ್ದರೆ ಬೆಳೆ ಸಂಪೂರ್ಣ ಹಾಳಾಗಿ ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಬೇಕಾಗುತ್ತಿತ್ತು ಎಂದು ರೈತ ತಿಳಿಸಿದ್ದಾರೆ. ಆದರೆ ಪ್ರಸ್ತುತ ರಕ್ಷಣಾ ಕವರ್ಗಳು ಇಲ್ಲದಿರುವುದರಿಂದ ಹೂವು ನೇರವಾಗಿ ಉರಿಯುವ ಬಿಸಿಲು ಹಾಗೂ ರಾತ್ರಿಯ ಇಬ್ಬನಿಗೆ ಒಡ್ಡಿಕೊಂಡು ಹಾಳಾಗುವ ಆತಂಕ ಎದುರಾಗಿದೆ. ಶಿಡ್ಲಘಟ್ಟ ತಾಲೂಕಿನಲ್ಲಿ ರೈತರ ಕೃಷಿ ಚಟುವಟಿಕೆಗಳ ಮೇಲಿನ ಇಂತಹ ದುಷ್ಕೃತ್ಯ ತಡೆಯಲು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮೇಲೂರು ಭಾಗದ ರೈತರು ಆಗ್ರಹಿಸಿದ್ದಾರೆ.


