
ಗಣಪತಿ ಕೂಡಿಸಲು ಅನುಮತಿ ಕೊಡಿ ಸಾರ್: ಪೊಲೀಸ್ ಠಾಣೆಗೆ ಅರ್ಜಿ ಸಲ್ಲಿಸಿ ಗಮನ ಸೆಳೆದ ಮುಧೋಳದ ಮಕ್ಕಳು
ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮಂಟೂರ ಗ್ರಾಮದ ಮೂವರು ಬಾಲಕರು, ಮುಂಬರುವ ಗಣೇಶ ಚತುರ್ಥಿ ಹಬ್ಬದ ಸಂದರ್ಭದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅಧಿಕೃತ ಅನುಮತಿ ಕೋರಿ ಪೊಲೀಸ್ ಠಾಣೆಗೆ ತೆರಳಿ ಎಲ್ಲರ ಗಮನ ಸೆಳೆದಿದ್ದಾರೆ. ಗ್ರಾಮದ ಹಿರಿಯರೊಂದಿಗೆ ಮುಧೋಳ ಪೊಲೀಸ್ ಠಾಣೆಯಲ್ಲಿ ಆಯೋಜಿಸಲಾಗಿದ್ದ ಶಾಂತಿ ಸಭೆಗೆ ಆಗಮಿಸಿದ್ದ ಈ ಶಾಲಾ ಮಕ್ಕಳು, ಕೈಯಲ್ಲಿ ಮನವಿ ಪತ್ರ ಹಿಡಿದು ನೇರವಾಗಿ ಸಿಪಿಐ ನಾಗರೆಡ್ಡಿ ಅವರನ್ನು ಭೇಟಿಯಾಗಿ ಅರ್ಜಿ ಸಲ್ಲಿಸಿದರು.
ಗಣೇಶ ಮೂರ್ತಿ ಪ್ರತಿಷ್ಠಾಪನೆಯ ಜೊತೆಗೆ ಗ್ರಾಮದ ಯುವಕರು ಮತ್ತು ಮಕ್ಕಳಿಗಾಗಿ ರಸಪ್ರಶ್ನೆ (ಕ್ವಿಜ್) ಸ್ಪರ್ಧೆಗಳು ಹಾಗೂ ಇತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸಿರುವುದಾಗಿ ಬಾಲಕರು ಅಧಿಕಾರಿಗೆ ತಿಳಿಸಿದರು. ಸಣ್ಣ ವಯಸ್ಸಿನಲ್ಲೇ ಕಾನೂನು ಮತ್ತು ಸಾರ್ವಜನಿಕ ನಿಯಮಗಳ ಬಗ್ಗೆ ಮಕ್ಕಳಿಗಿರುವ ಅರಿವು ಹಾಗೂ ಮುಗ್ಧತೆಯನ್ನು ಕಂಡು ಪ್ರಭಾವಿತರಾದ ಸಿಪಿಐ ನಾಗರೆಡ್ಡಿ, ಮಕ್ಕಳ ಜವಾಬ್ದಾರಿಯುತ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮಕ್ಕಳ ಬೆನ್ನು ತಟ್ಟಿದ ಅವರು, ಹಬ್ಬವನ್ನು ಶಾಂತಿಯುತವಾಗಿ ಆಚರಿಸುವಂತೆ ಹಾಗೂ ಶಿಕ್ಷಣಕ್ಕೆ ಆದ್ಯತೆ ನೀಡುವಂತೆ ಹಾರೈಸಿದರು.
ಪೊಲೀಸ್ ಅಧಿಕಾರಿಯ ಎದುರು ಕೈಯಲ್ಲಿ ಅರ್ಜಿ ಹಿಡಿದು ನಿಂತಿರುವ ಬಾಲಕರ ಫೋಟೋಗಳುಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜಿಲ್ಲೆಯಾದ್ಯಂತ ನೆಟ್ಟಿಗರು ಹಾಗೂ ಸಾರ್ವಜನಿಕರಿಂದ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ. ಸಣ್ಣ ವಯಸ್ಸಿನಲ್ಲೇ ಮಕ್ಕಳಲ್ಲಿ ಮೂಡಿರುವ ಈ ನಾಗರಿಕ ಪ್ರಜ್ಞೆ ಮತ್ತು ಪೊಲೀಸ್ ಇಲಾಖೆಯ ಸೌಹಾರ್ದಯುತ ನಡವಳಿಕೆಯನ್ನು ಸ್ಥಳೀಯ ಮುಖಂಡರು ಶ್ಲಾಘಿಸಿದ್ದಾರೆ. ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಕಾನೂನಿನ ಬಗೆಗಿನ ಗೌರವಕ್ಕೆ ಈ ಘಟನೆ ಸಾಕ್ಷಿಯಾಗಿದೆ.


