
ಗರ್ಭಿಣಿ ಪತ್ನಿಯ ಕೊಲೆ ಪ್ರಕರಣ: ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಚಿಕ್ಕಮಗಳೂರು ನ್ಯಾಯಾಲಯ
ಚಿಕ್ಕಮಗಳೂರಿನ ಶಂಕರಪುರ ನಿವಾಸಿ 38 ವರ್ಷದ ಮಂಜುನಾಥ್ ಅಲಿಯಾಸ್ ಮಂಜು ಎಂಬಾತನಿಗೆ, ಒಂಬತ್ತು ತಿಂಗಳ ಗರ್ಭಿಣಿ ಪತ್ನಿ ಶಾರದಾ ಅವರ ಕೊಲೆ ಪ್ರಕರಣದಲ್ಲಿ ಚಿಕ್ಕಮಗಳೂರಿನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಕಾರಾಗೃಹ ಶಿಕ್ಷೆ ವಿಧಿಸಿದೆ. ನ್ಯಾಯಾಧೀಶರಾದ ಕಿರಣ್ ಕಿಣಿ ಅವರು ಭಾರತೀಯ ನ್ಯಾಯ ಸಂಹಿತೆಯ (ಬಿಎನ್ಎಸ್) ಸೆಕ್ಷನ್ 103ರ ಅಡಿಯಲ್ಲಿ ಈ ತೀರ್ಪು ನೀಡಿದ್ದು, ಆರೋಪಿಗೆ ₹75,000 ದಂಡ ವಿಧಿಸಿದ್ದಾರೆ. ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿ 10 ತಿಂಗಳ ಸಾದಾ ಸಜೆಯನ್ನು ಅನುಭವಿಸಬೇಕಾಗುತ್ತದೆ.
ಪೊಲೀಸ್ ವರದಿ ಪ್ರಕಾರ, 2025ರ ಜನವರಿ 14ರಂದು ಕುಡಿದು ಮನೆಗೆ ಬಂದಿದ್ದ ಮಂಜುನಾಥ್, ಊಟದ ವಿಚಾರವಾಗಿ ಜಗಳ ತೆಗೆದು ಪತ್ನಿಯ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದನು. ಗಂಭೀರವಾಗಿ ಗಾಯಗೊಂಡಿದ್ದ ಶಾರದಾ ಅವರನ್ನು ಹಾಸನದ ಬೋಧಕ ಆಸ್ಪತ್ರೆಗೆ ಸೇರಿಸಲಾಗಿತ್ತು. ಅಲ್ಲಿ ಅವರು ಗಂಡು ಮಗುವಿಗೆ ಜನ್ಮ ನೀಡಿದ ನಂತರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಚಿಕ್ಕಮಗಳೂರು ಮಹಿಳಾ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಅಭಯ್ ಪ್ರಕಾಶ್ ಸೋಮನಾಳ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಸರ್ಕಾರಿ ಅಭಿಯೋಜಕರಾದ ಎಚ್.ಎಸ್. ಲೋಹಿತಾಶಾಚಾರ್ ವಾದ ಮಂಡಿಸಿದ್ದರು. ಸಂತ್ರಸ್ತೆಯ ತಾಯಿಗೆ ಸೂಕ್ತ ಪರಿಹಾರ ನೀಡುವಂತೆ ನ್ಯಾಯಾಲಯವು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಶಿಫಾರಸು ಮಾಡಿದೆ.


