
ಗುಳ್ಳೆದಾಳ ಗ್ರಾಮದಲ್ಲಿ ಶಾಲಾ ಮಕ್ಕಳಿಗೆ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸಲು ಕೆಕೆಆರ್ಟಿಸಿಗೆ ಶಾಸಕ ನೇಮಿರಾಜ್ ನಾಯಕ್ ಸೂಚನೆ
ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಗುಳ್ಳೆದಾಳ ಗ್ರಾಮದಲ್ಲಿ ಗ್ರಾಮೀಣ ಶಾಲಾ ವಿದ್ಯಾರ್ಥಿಗಳು ಎದುರಿಸುತ್ತಿದ್ದ ಸಾರಿಗೆ ಸಮಸ್ಯೆಗೆ ಶಾಸಕ ನೇಮಿರಾಜ್ ನಾಯಕ್ ತಕ್ಷಣದ ಪರಿಹಾರ ಒದಗಿಸಿದ್ದಾರೆ. ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಭೂಮಿಪೂಜೆ ನೆರವೇರಿಸಲು ತೆರಳಿದ್ದ ಶಾಸಕರನ್ನು ತಡೆದ ಶಾಲಾ ವಿದ್ಯಾರ್ಥಿಗಳು, ಸರಿಯಾದ ಸಮಯಕ್ಕೆ ಬಸ್ ಸೌಕರ್ಯವಿಲ್ಲದೆ ಶಾಲೆಗಳಿಗೆ ತೆರಳಲು ಪಡುತ್ತಿರುವ ಕಷ್ಟವನ್ನು ವಿವರಿಸಿದರು.
ವಿದ್ಯಾರ್ಥಿಗಳ ಮನವಿಯನ್ನು ಆಲಿಸಿದ ಶಾಸಕ ನೇಮಿರಾಜ್ ನಾಯಕ್, ತಕ್ಷಣವೇ ಸ್ಥಳದಿಂದಲೇ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ (ಕೆಕೆಆರ್ಟಿಸಿ) ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ದೂರವಾಣಿ ಕರೆ ಮಾಡಿದರು. ಶಾಲಾ ಸಮಯಕ್ಕೆ ಸರಿಯಾಗಿ ಗುಳ್ಳೆದಾಳ ಮಾರ್ಗದಲ್ಲಿ ಕೆಎಸ್ಆರ್ಟಿಸಿ ಬಸ್ ಸಂಚಾರವನ್ನು ತಕ್ಷಣವೇ ಆರಂಭಿಸುವಂತೆ ಶಾಸಕರು ಖಡಕ್ ಸೂಚನೆ ನೀಡಿದರು.
ಶಾಸಕರ ಈ ತಕ್ಷಣದ ಸ್ಪಂದನೆಗೆ ಗುಳ್ಳೆದಾಳ ಗ್ರಾಮದ ವಿದ್ಯಾರ್ಥಿಗಳು, ಪಾಲಕರು ಮತ್ತು ಸಾರ್ವಜನಿಕರು ತೀವ್ರ ಸಂತಸ ವ್ಯಕ್ತಪಡಿಸಿದ್ದಾರೆ. ಹಗರಿಬೊಮ್ಮನಹಳ್ಳಿ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಸೂಕ್ತ ಸಾರಿಗೆ ವ್ಯವಸ್ಥೆಯು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅತ್ಯಂತ ಅಗತ್ಯವಾಗಿದೆ. ಶಾಸಕರ ಜನಪರ ನಿರ್ಧಾರದಿಂದಾಗಿ ವಿದ್ಯಾರ್ಥಿಗಳ ಸಮಯ ಉಳಿತಾಯವಾಗಲಿದ್ದು, ಶಾಲಾ ಹಾಜರಾತಿ ಹೆಚ್ಚಲು ಮತ್ತು ನಿತ್ಯದ ಪ್ರಯಾಣ ಸುಗಮವಾಗಲು ಸಹಕಾರಿಯಾಗಲಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.


