
ಹಬ್ಬಗಳ ಹಿನ್ನೆಲೆ ಹುಬ್ಬಳ್ಳಿ - ಚಿಕ್ಕಮಗಳೂರು ನಡುವೆ ವಾರಾಂತ್ಯದ ವಿಶೇಷ ರೈಲು ಸಂಚಾರ ಆರಂಭಿಸಿದ ನೈರುತ್ಯ ರೈಲ್ವೆ
ಮುಂಬರುವ ಸಾಲು ಸಾಲು ಹಬ್ಬಗಳಾದ ಗಣೇಶ ಚತುರ್ಥಿ, ದಸರಾ ಮತ್ತು ದೀಪಾವಳಿ ಹಿನ್ನೆಲೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸಲು ನೈರುತ್ಯ ರೈಲ್ವೆಯು ಎಸ್.ಎಸ್.ಎಸ್. ಹುಬ್ಬಳ್ಳಿ ಮತ್ತು ಚಿಕ್ಕಮಗಳೂರು ರೈಲು ನಿಲ್ದಾಣದ ನಡುವೆ ವಾರಾಂತ್ಯದ ವಿಶೇಷ ಎಕ್ಸ್ಪ್ರೆಸ್ ರೈಲು (ರೈಲು ಸಂಖ್ಯೆ 07341/07342) ಸಂಚಾರವನ್ನು ಆರಂಭಿಸಿದೆ. ಈ ವಿಶೇಷ ರೈಲು ಸೇವೆಗೆ ರೈಲ್ವೆ ಇಲಾಖೆ ಅನುಮೋದನೆ ನೀಡಿದ್ದು, ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.
ಅಧಿಕೃತ ವೇಳಾಪಟ್ಟಿಯ ಪ್ರಕಾರ, ರೈಲು ಸಂಖ್ಯೆ 07341 ಹುಬ್ಬಳ್ಳಿಯಿಂದ ಬೆಳಿಗ್ಗೆ 5:00 ಗಂಟೆಗೆ ಹೊರಟು ಬೆಳಿಗ್ಗೆ 11:15 ಗಂಟೆಗೆ ಚಿಕ್ಕಮಗಳೂರು ತಲುಪಲಿದೆ. ಮರುಪ್ರಯಾಣದಲ್ಲಿ ರೈಲು ಸಂಖ್ಯೆ 07342 ಚಿಕ್ಕಮಗಳೂರಿನಿಂದ ಸಂಜೆ 5:30 ಗಂಟೆಗೆ ಹೊರಟು ರಾತ್ರಿ 11:20 ಗಂಟೆಗೆ ಹುಬ್ಬಳ್ಳಿ ತಲುಪಲಿದೆ. ಈ ರೈಲು ಹಾವೇರಿ, ರಾಣೆಬೆನ್ನೂರು, ದಾವಣಗೆರೆ, ಬೀರೂರು, ಕಡೂರು, ಸಖರಾಯಪಟ್ಟಣ ಸೇರಿದಂತೆ ಪ್ರಮುಖ ನಿಲ್ದಾಣಗಳ ಮೂಲಕ ಸಂಚರಿಸಲಿದೆ.
ಸೆಪ್ಟೆಂಬರ್ 5 ರಿಂದ ಅಕ್ಟೋಬರ್ 31 ರವರೆಗೆ ಪ್ರತಿ ಶನಿವಾರ ಮತ್ತು ಭಾನುವಾರಗಳಂದು ಈ ರೈಲು ಸಂಚರಿಸಲಿದೆ. ಉತ್ತರ ಕರ್ನಾಟಕ ಹಾಗೂ ಮಲೆನಾಡು ಭಾಗದ ನಡುವೆ ಸಂಚರಿಸುವ ಸಾರ್ವಜನಿಕರು, ವಿದ್ಯಾರ್ಥಿಗಳು ಮತ್ತು ಪ್ರವಾಸಿಗರಿಗೆ ಈ ರೈಲು ಸೇವೆಯಿಂದ ಹೆಚ್ಚಿನ ಅನುಕೂಲವಾಗಲಿದ್ದು, ಹಬ್ಬದ ದಿನಗಳಲ್ಲಿ ರಸ್ತೆ ಸಂಚಾರದ ಮೇಲಿನ ಒತ್ತಡ ಕಡಿಮೆಯಾಗಲಿದೆ.


