
ಹೈಕೋರ್ಟ್ ಆದೇಶದ ಬೆನ್ನಲ್ಲೇ ಶಿರಸಿ ತಾಲೂಕಿನಲ್ಲಿ 110 ಎಕರೆ ಅರಣ್ಯ ಭೂಮಿ ಮುಟ್ಟುಗೋಲು
ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಗೋಳಿಕಟ್ಟಾ ಗ್ರಾಮದಲ್ಲಿ 110 ಎಕರೆ ಖಾಲಿ ಅರಣ್ಯ ಭೂಮಿಯನ್ನು ಕರ್ನಾಟಕ ಅರಣ್ಯ ಇಲಾಖೆ ಯಶಸ್ವಿಯಾಗಿ ವಶಪಡಿಸಿಕೊಂಡಿದೆ. ಕಾಮಧೇನು ಡೈರಿ ಮತ್ತು ಹಣ್ಣು ಸಂಸ್ಕರಣಾ ಸಹಕಾರಿ ಸಂಘ ನಿಯಮಿತ ಹೂಡಿದ್ದ ಅರ್ಜಿಯನ್ನು ಧಾರವಾಡದ ಹೈಕೋರ್ಟ್ ಪೀಠ ವಜಾಗೊಳಿಸಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಕಾಮಧೇನು ಸಹಕಾರಿ ಸಂಘಕ್ಕೆ 1969ರಲ್ಲಿ ಸರಕಾರವು 389.07 ಎಕರೆ ಅರಣ್ಯ ಭೂಮಿಯನ್ನು ಗುತ್ತಿಗೆ ಆಧಾರದ ಮೇಲೆ ನೀಡಿತ್ತು. 1976ರಲ್ಲಿ ಗುತ್ತಿಗೆ ಅವಧಿಯನ್ನು 20 ವರ್ಷಗಳಿಗೆ ಸೀಮಿತಗೊಳಿಸಲಾಗಿದ್ದು, 1989ರ ಡಿಸೆಂಬರ್ನಲ್ಲಿ ಗುತ್ತಿಗೆ ಅವಧಿ ಪೂರ್ಣಗೊಂಡಿತ್ತು. ಆದಾಗ್ಯೂ, ಸಂಘವು ಭೂಮಿಯನ್ನು ತನ್ನ ವಶದಲ್ಲೇ ಇರಿಸಿಕೊಂಡಿತ್ತು. ಈ ಕುರಿತು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರ ಪೀಠವು, ಗುತ್ತಿಗೆ ಅವಧಿ ಮುಗಿದ ನಂತರ ಸಂಘಕ್ಕೆ ಭೂಮಿಯ ಮೇಲೆ ಯಾವುದೇ ಕಾನೂನುಬದ್ಧ ಹಕ್ಕು ಇರುವುದಿಲ್ಲ ಎಂದು ಸ್ಪಷ್ಟಪಡಿಸಿತು.
ನ್ಯಾಯಾಲಯದ ತೀರ್ಪಿನ ನಂತರ, ಶಿರಸಿ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ಸಂದೀಪ್ ಸೂರ್ಯವಂಶಿ ಅವರ ನೇತೃತ್ವದ ಅಧಿಕಾರಿಗಳ ತಂಡ ಭೂಮಿ ವಶಪಡಿಸಿಕೊಳ್ಳುವ ಪ್ರಕ್ರಿಯೆ ಆರಂಭಿಸಿತು. ಈ ಸಂದರ್ಭದಲ್ಲಿ, ಜಮೀನಿನಲ್ಲಿ ಅಡಿಕೆ ಹಾಗೂ ಹಂಗಾಮಿ ಬೆಳೆ ಬೆಳೆದಿದ್ದ ಸ್ಥಳೀಯ ರೈತರು ತಮಗೆ ತೊಂದರೆಯಾಗಬಹುದೆಂಬ ಭೀತಿಯಿಂದ ಪ್ರತಿಭಟನೆ ನಡೆಸಿದರು. ಇದಕ್ಕೆ ಸ್ಪಷ್ಟನೆ ನೀಡಿದ ಡಿಸಿಎಫ್, ಹಂಗಾಮಿ ಬೆಳೆ ಬೆಳೆದಿರುವ ರೈತರಿಗೆ ಕೊಯ್ಲು ಮಾಡಲು ಕಾಲಾವಕಾಶ ನೀಡಲಾಗುವುದು ಹಾಗೂ ಅಡಿಕೆ ತೋಟಗಳ ಭೂಮಿ ವಶಕ್ಕೆ ಪ್ರತ್ಯೇಕ ಪ್ರಕ್ರಿಯೆ ನಡೆಸಲಾಗುವುದು ಎಂದು ಭರವಸೆ ನೀಡಿದರು.
ಪಶ್ಚಿಮ ಘಟ್ಟಗಳ ವ್ಯಾಪ್ತಿಯಲ್ಲಿ ನಡೆದ ಅತಿದೊಡ್ಡ ಭೂಮಿ ಮರುಪಡೆಯುವಿಕೆ ಕಾರ್ಯಾಚರಣೆಗಳಲ್ಲಿ ಒಂದಾದ ಈ 110 ಎಕರೆ ಪ್ರದೇಶದಲ್ಲಿ ಸ್ಥಳೀಯ ಸಸ್ಯ ಪ್ರಭೇದಗಳನ್ನು ನೆಟ್ಟು ಅರಣ್ಯೀಕರಣಗೊಳಿಸಲು ಹಾಗೂ ಮಣ್ಣು ಸಂರಕ್ಷಣಾ ಕಾಮಗಾರಿಗಳನ್ನು ಕೈಗೊಳ್ಳಲು ಅರಣ್ಯ ಇಲಾಖೆ ಯೋಜಿಸಿದೆ.


