
ಹನೂರಿನ ಅಂಬಿಕಾಪುರದಲ್ಲಿ ರುದ್ರಭೂಮಿ ಇಲ್ಲದೆ ಹಳ್ಳದ ದಂಡೆಯಲ್ಲೇ ವೃದ್ಧನ ಅಂತ್ಯಸಂಸ್ಕಾರ
ಹನೂರು ತಾಲೂಕಿನ ಅಜ್ಜಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಬಿಕಾಪುರ ಗ್ರಾಮದಲ್ಲಿ ಸ್ಥಳೀಯ ಆಡಳಿತದ ನಿರ್ಲಕ್ಷ್ಯದಿಂದಾಗಿ ತೀವ್ರ ಸಾರ್ವಜನಿಕ ಆಕ್ರೋಶ ವ್ಯಕ್ತವಾಗಿದೆ. ಗ್ರಾಮದ ಓಬಿಸಿ ಸಮುದಾಯಕ್ಕೆ ಸೇರಿದ ಪಚ್ಚಿಯಪ್ಪ ಎಂಬ ವೃದ್ಧ ಭಾನುವಾರ ಮೃತಪಟ್ಟಿದ್ದು, ಸ್ವಂತ ರುದ್ರಭೂಮಿ ಇಲ್ಲದ ಕಾರಣ ಅವರ ಅಂತ್ಯಸಂಸ್ಕಾರವನ್ನು ಅನಿವಾರ್ಯವಾಗಿ ಸಮೀಪದ ಉಡುತೊರೆ ಹಳ್ಳದ ದಂಡೆಯಲ್ಲೇ ನೆರವೇರಿಸಲಾಯಿತು.
ಅಂಬಿಕಾಪುರದಲ್ಲಿ ಕಳೆದ ೭೦ ವರ್ಷಗಳಿಂದ ವಾಸಿಸುತ್ತಿರುವ ಓಬಿಸಿ ಜನಾಂಗದ ಜನರಿಗೆ ಶವಸಂಸ್ಕಾರಕ್ಕೆ ಸೂಕ್ತ ಜಾಗವಿಲ್ಲದೆ ಸದಾ ಪರದಾಡುವಂತಾಗಿದೆ. ಈ ಹಿಂದೆ ಸರ್ಕಾರದಿಂದ ಸಾರ್ವಜನಿಕ ಬಳಕೆಗಾಗಿ ೪೪ ಸೆಂಟ್ ಸ್ಮಶಾನದ ಜಾಗ ಮಂಜೂರಾಗಿದ್ದರೂ, ಅದನ್ನು ಬೇರೆ ಸಮುದಾಯದವರು ಅತಿಕ್ರಮಿಸಿ ಅಕ್ರಮವಾಗಿ ಬೋರ್ಡ್ಗಳನ್ನು ಹಾಕಿಕೊಂಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಈ ಅಕ್ರಮ ಬೋರ್ಡ್ಗಳನ್ನು ತೆರವುಗೊಳಿಸಿ ಸ್ಮಶಾನದ ಜಾಗವನ್ನು ಮುಕ್ತಗೊಳಿಸುವಂತೆ ತಾಲೂಕು ಆಡಳಿತ ಹಾಗೂ ಕಂದಾಯ ಇಲಾಖೆಗೆ ನಾಲ್ಕು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ.
ವಿಶೇಷವಾಗಿ ಮಳೆಗಾಲದ ಸಮಯದಲ್ಲಿ ಹಳ್ಳದಲ್ಲಿ ನೀರು ಹೆಚ್ಚಾಗಿ ಹರಿಯುವುದರಿಂದ ಹಳ್ಳದ ದಂಡೆಯಲ್ಲಿ ಅಂತಿಮ ಸಂಸ್ಕಾರ ನಡೆಸುವುದು ಜೀವಕ್ಕೆ ಕಂಟಕವಾಗಿದೆ. ಅಧಿಕಾರಿಗಳ ಈ ಉದಾസീನ ಧೋರಣೆಯನ್ನು ಖಂಡಿಸಿ ಸ್ಥಳೀಯ ಗ್ರಾಮಸ್ಥರು ಹಾಗೂ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರು ಸ್ಥಳದಲ್ಲೇ ಪ್ರತಿಭಟನೆ ನಡೆಸಿದರು. ಅಂಬಿಕಾಪುರ ಗ್ರಾಮದ ಓಬಿಸಿ ಸಮುದಾಯಕ್ಕೆ ತಕ್ಷಣವೇ ೧ ಎಕರೆ ಸರ್ಕಾರಿ ಜಮೀನನ್ನು ರುದ್ರಭೂಮಿಗಾಗಿ ಕಾಯ್ದಿರಿಸಿ, ರಸ್ತೆ ಸಂಪರ್ಕ, ಕುಡಿಯುವ ನೀರು ಹಾಗೂ ತಡೆಗೋಡೆ ನಿರ್ಮಿಸಿಕೊಡಬೇಕೆಂದು ಕಂದಾಯ ಇಲಾಖೆಗೆ ಆಗ್ರಹಿಸಿದ್ದಾರೆ.


