
ಹೊಳೆನರಸೀಪುರ ತಾಲೂಕಿನ ಹಳ್ಳಿಮೈಸೂರಿಗೆ ಡಾ. ಬಿ.ಆರ್. ಅಂಬೇಡ್ಕರ್ ಮೊರಾರ್ಜಿ ವಸತಿ ಶಾಲೆ ತಾತ್ಕಾಲಿಕ ಸ್ಥಳಾಂತರ
ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಹಳ್ಳಿಮೈಸೂರು ಗ್ರಾಮಕ್ಕೆ ಡಾ. ಬಿ.ಆರ್. ಅಂಬೇಡ್ಕರ್ ಮೊರಾರ್ಜಿ ದೇಸಾಯಿ ವಸತಿ ಶಾಲೆಯನ್ನು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ತಾತ್ಕಾಲಿಕವಾಗಿ ಸ್ಥಳಾಂತರಿಸಿದ್ದಾರೆ. 6ನೇ ತರಗತಿಯಿಂದ 10ನೇ ತರಗತಿವರೆಗಿನ 92 ಬಾಲಕರು ಹಾಗೂ 80 ಬಾಲಕಿಯರು ಸೇರಿದಂತೆ ಒಟ್ಟು 172 ವಿದ್ಯಾರ್ಥಿಗಳು ಈ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಈ ಶಾಲೆ ಕಳೆದ ಐದು ವರ್ಷಗಳಿಂದ ಶಾಂತಿಗ್ರಾಮದಲ್ಲಿ ಬಾಡಿಗೆ ಶೆಡ್ ಒಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇಲಾಖೆಯು ಪ್ರತಿ ತಿಂಗಳು ₹1.08 ಲಕ್ಷ ಬಾಡಿಗೆ ಪಾವತಿಸುತ್ತಿತ್ತು.
ಶೆಡ್ನಲ್ಲಿ ಶಾಲೆ ನಡೆಯುತ್ತಿರುವ ಕುರಿತು ವರದಿಯಾದ ಹಿನ್ನೆಲೆಯಲ್ಲಿ ಇಲಾಖೆಯು ವಿದ್ಯಾರ್ಥಿಗಳನ್ನು ಸುಸಜ್ಜಿತ ಕಟ್ಟಡಕ್ಕೆ ಸ್ಥಳಾಂತರಿಸಲು ತೀರ್ಮಾನಿಸಿತು. ಆರಂಭದಲ್ಲಿ ಸ್ಥಳೀಯ ಅನುಕೂಲತೆ ಕಾರಣಕ್ಕೆ ಸ್ಥಳಾಂತರಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಪೋಷಕರೊಂದಿಗೆ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ದೂದ್ಪೀರ್ ಹಾಗೂ ಪೊಲೀಸ್ ಅಧಿಕಾರಿಗಳು ದಿನಪೂರ್ತಿ ಮಾತುಕತೆ ನಡೆಸಿ, ಹಳ್ಳಿಮೈಸೂರಿನಲ್ಲಿ ಲಭ್ಯವಿರುವ ಉತ್ತಮ ಮೂಲಸೌಕರ್ಯ ಹಾಗೂ ಸುರಕ್ಷತೆಯ ಬಗ್ಗೆ ಮನವರಿಕೆ ಮಾಡಿಕೊಟ್ಟರು.
ಪೋಷಕರು ಲಿಖಿತ ಒಪ್ಪಿಗೆ ನೀಡಿದ ನಂತರ ಅಧಿಕಾರಿಗಳು ಮೂರು ಬಸ್ಗಳ ಮೂಲಕ 172 ವಿದ್ಯಾರ್ಥಿಗಳನ್ನು ಹೊಳೆನರಸೀಪುರ ತಾಲೂಕಿನ ಹಳ್ಳಿಮೈಸೂರಿನ ನೂತನ ಕಟ್ಟಡಕ್ಕೆ ಸುರಕ್ಷಿತವಾಗಿ ಕರೆತಂದರು. ಶಾಂತಿಗ್ರಾಮದಲ್ಲಿ ವಸತಿ ಶಾಲೆಯ ನೂತನ ಸ್ವಂತ ಕಟ್ಟಡ ನಿರ್ಮಾಣ ಕಾರ್ಯ ಮುಕ್ತಾಯಗೊಳ್ಳಲು ಸುಮಾರು 6 ತಿಂಗಳು ಬೇಕಾಗಲಿದ್ದು, ಅಲ್ಲಿಯವರೆಗೆ ಹೊಳೆನರಸೀಪುರ ತಾಲೂಕಿನ ಹಳ್ಳಿಮೈಸೂರಿನಲ್ಲಿ ಶಾಲೆಯು ಸುಸೂತ್ರವಾಗಿ ಕಾರ್ಯಾಚರಿಸಲಿದೆ ಎಂದು ಇಲಾಖಾ ಅಧಿಕಾರಿಗಳು ತಿಳಿಸಿದ್ದಾರೆ.


