
ಇಂಡಿ ತಾಲ್ಲೂಕಿನ ಗ್ರಾಮಗಳಲ್ಲಿ ಉದ್ಯೋಗ ಖಾತರಿ ಕಾಮಗಾರಿ ಪರಿಶೀಲನೆ: ಕೂಲಿಕಾರರು ಗುಳೆ ಹೋಗುವುದು ಬೇಡ ಎಂದ ಜಿಪಂ ಸಿಇಒ
ವಿಜಯಪುರ: ಇಂಡಿ ತಾಲ್ಲೂಕಿನ ಬಬಲಾದ, ಇಂಗಳಗಿ, ಮಾವಿನಹಳ್ಳಿ, ಬಸನಾಳ, ಕೊಟ್ನಾಳ ಹಾಗೂ ಬಳ್ಳೊಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಗ್ರಾಮೀಣ ಉದ್ಯೋಗ ಖಾತರಿ ಹಾಗೂ ಜಲ ಸಂರಕ್ಷಣಾ ಕಾಮಗಾರಿಗಳನ್ನು ವಿಜಯಪುರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ರಿಷಿ ಆನಂದ್ ಅವರು ನೇರವಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪರಿಶೀಲನೆಯ ವೇಳೆ ಕೆರೆ ಮತ್ತು ಕಾಲುವೆಗಳ ಪುನಶ್ಚೇತನ ಹಾಗೂ ಹೂಳು ತೆಗೆಯುವ ಕಾರ್ಯಗಳ ಪ್ರಗತಿಯನ್ನು ಪರಿಶೀಲಿಸಿದ ಸಿಇಒ, ಬರಗಾಲದ ಸನ್ನಿವೇಶದಲ್ಲಿ ಪ್ರತಿಯೊಬ್ಬ ಅರ್ಹ ಕೂಲಿಕಾರರಿಗೂ ತಕ್ಷಣವೇ ಕೆಲಸ ಸಿಗುವಂತೆ ಕ್ರಮ ಕೈಗೊಳ್ಳಲು ಪಂಚಾಯಿತಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸ್ಥಳದಲ್ಲಿದ್ದ ಕೂಲಿಕಾರರೊಂದಿಗೆ ಮಾತನಾಡಿದ ಅವರು, ಬದುಕಿಗಾಗಿ ಮತ್ತು ಉದ್ಯೋಗ ಹುಡುಕಿಕೊಂಡು ನಗರಗಳಿಗೆ ಹಾಗೂ ಹೊರರಾಜ್ಯಗಳಿಗೆ ಗುಳೆ ಹೋಗುವ ಯಾವುದೇ ಅಗತ್ಯವಿಲ್ಲ. ಪ್ರತಿಯೊಂದು ಗ್ರಾಮದಲ್ಲೂ ನಿರಂತರವಾಗಿ ಕೂಲಿ ಕೆಲಸ ಒದಗಿಸಲು ಜಿಲ್ಲಾಡಳಿತ ಬದ್ಧವಾಗಿದೆ ಎಂದು ಅಭಯ ನೀಡಿದರು. ಈ ಪರಿಶೀಲನಾ ಸಂದರ್ಭದಲ್ಲಿ ಮಹಾದೇವಪ್ಪ ಏವೂರ, ಸಂಜಯ ಖಡಗೇಕರ, ಪಿಡಿಒ ಸಿ.ಜಿ. ಪಾರೆ ಹಾಗೂ ಸ್ಥಳೀಯ ಪಂಚಾಯಿತಿ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.


