
ಜಗಳೂರಲ್ಲಿ ಪಿಒಪಿ ಗಣೇಶ ಮೂರ್ತಿ ಮಾರಾಟಕ್ಕೆ ತಡೆ: ನಿಯಮ ಉಲ್ಲಂಘಿಸಿದರೆ ಜಪ್ತಿ ಎಚ್ಚರಿಕೆ
ಸಾಂಬ್ರದಾಯಿಕ ಶ್ರದ್ಧಾಭಕ್ತಿಗಳಿಂದ ಆಚರಿಸಲಾಗುವ ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆಯಲ್ಲಿ, ದಾವಣಗೆರೆ ಜಿಲ್ಲೆಯ ಜಗಳೂರು ಪಟ್ಟಣದಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಮತ್ತು ಅಪಾಯಕಾರಿ ರಾಸಾಯನಿಕ ಬಣ್ಣಲೇಪಿತ ಗಣೇಶ ಮೂರ್ತಿಗಳ ತಯಾರಿಕೆ ಹಾಗೂ ಮಾರಾಟದ ವಿರುದ್ಧ ಸ್ಥಳೀಯ ಆಡಳಿತವು ಕಟ್ಟುನಿಟ್ಟಿನ ತಪಾಸಣೆ ನಡೆಸಿದೆ. ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ರಾಜ್ಯ ಸರ್ಕಾರದ ನಿರ್ದೇಶನದಂತೆ, ಜಗಳೂರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸಿ. ಲೋಕ್ಯಾನಾಯ್ಕ್ ಅವರ ನೇತೃತ್ವದಲ್ಲಿ ಅಧಿಕಾರಿಗಳ ತಂಡವು ಪಟ್ಟಣದ ವಿವಿಧ ಮೂರ್ತಿ ಮಾರಾಟ ಮಳಿಗೆಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿತು.
ಈ ಕಾರ್ಯಾಚರಣೆಯಲ್ಲಿ ಪಟ್ಟಣ ಪಂಚಾಯಿತಿ ಆರೋಗ್ಯಾಧಿಕಾರಿ ಬರಮಪ್ಪ, ಸಿಬ್ಬಂದಿಗಳಾದ ನೇತ್ರಾವತಿ, ಮಮತಾ, ರಾಜು ಹಾಗೂ ನಗರ ಆಡಳಿತದ ಸಿಬ್ಬಂದಿ ಭಾಗವಹಿಸಿದ್ದರು. ಪರಿಶೀಲನೆ ವೇಳೆ ಮುಖ್ಯಾಧಿಕಾರಿ ಲೋಕ್ಯಾನಾಯ್ಕ್ ಮಾತನಾಡಿ, ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ಪಿಒಪಿ ಮೂರ್ತಿಗಳನ್ನು ಸಂಗ್ರಹಿಸಿಡುವುದು, ಸಾಗಣೆ ಮಾಡುವುದು ಅಥವಾ ಮಾರಾಟ ಮಾಡುವುದು ಕಂಡುಬಂದಲ್ಲಿ ಅಂತಹ ಮೂರ್ತಿಗಳನ್ನು ತಕ್ಷಣವೇ ಜಪ್ತಿ ಮಾಡಲಾಗುವುದು ಹಾಗೂ ತಪ್ಪಿತಸ್ಥರ ವಿರುದ್ಧ ಕಾನೂನು ಪ್ರಕಾರ ಕಠಿಣ ದಂಡ ಹಾಗೂ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಗಣೇಶ ವಿಸರ್ಜನೆ ವೇಳೆಯಲ್ಲಿ ಸ್ಥಳೀಯ ಕೆರೆ-ಕಟ್ಟೆಗಳು ಹಾಗೂ ಜಲಮೂಲಗಳು ಕಲುಷಿತಗೊಳ್ಳುವುದನ್ನು ತಡೆಯುವುದು ಈ ತಪಾಸಣೆಯ ಮುಖ್ಯ ಉದ್ದೇಶವಾಗಿದೆ. ಜಗಳೂರು ತಾಲೂಕಿನ ಸಾರ್ವಜನಿಕರು, ಉತ್ಸವ ಸಮಿತಿಗಳು ಹಾಗೂ ಮೂರ್ತಿ ತಯಾರಕರು ಸಾಂಪ್ರದಾಯಿಕ ಮಣ್ಣಿನ ಪರಿಸರಸ್ನೇಹಿ ಗಣೇಶ ಮೂರ್ತಿಗಳನ್ನೇ ಬಳಸಿ ಪರಿಸರ ಸಂರಕ್ಷಣೆಗೆ ಸಹಕರಿಸಬೇಕು ಎಂದು ಪಟ್ಟಣ ಪಂಚಾಯಿತಿ ವಿನಂತಿಸಿದೆ.


