
ಕಾಳಗಿ | ಪಿಎಂ ಕಿಸಾನ್ ಫಲಾನುಭವಿಗಳಿಗೆ ಬಯೋಮೆಟ್ರಿಕ್ ಇ-ಕೆವೈಸಿ ಕಡ್ಡಾಯ
ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ ಕಿಸಾನ್) ಯೋಜನೆಯ ಅರ್ಹ ಫಲಾನುಭವಿ ರೈತರು ಮುಂದಿನ ಕಂತಿನ ನೆರವು ಪಡೆಯಲು ಬಯೋಮೆಟ್ರಿಕ್ ಅಥವಾ ಫೇಸ್ ಆಧಾರಿತ ಇ-ಕೆವೈಸಿ ಪ್ರಕ್ರಿಯೆಯನ್ನು ಕಡ್ಡಾಯವಾಗಿ ಪೂರ್ಣಗೊಳಿಸಬೇಕು ಎಂದು ಕಾಳಗಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ರಾಹುಲ್ ಚವ್ಹಾಣ ತಿಳಿಸಿದ್ದಾರೆ.
ಯೋಜನೆಯಡಿ ನಕಲಿ ಫಲಾನುಭವಿಗಳನ್ನು ತಡೆಗಟ್ಟುವುದು ಹಾಗೂ ಮೃತಪಟ್ಟ ರೈತರ ಹೆಸರುಗಳನ್ನು ಪಟ್ಟಿಯಿಂದ ಕೈಬಿಟ್ಟು, ನೈಜ ಮತ್ತು ಅರ್ಹ ರೈತರ ಖಾತೆಗಳಿಗೆ ಪಾರದರ್ಶಕವಾಗಿ ಹಣ ಜಮೆ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಕಟ್ಟುನಿಟ್ಟಿನ ಕ್ರಮ ಜಾರಿಗೆ ತಂದಿದೆ ಎಂದು ಅವರು ವಿವರಿಸಿದ್ದಾರೆ. ಕಾಳಗಿ ತಾಲೂಕಿನ ಎಲ್ಲಾ ನೋಂದಾಯಿತ ರೈತರು ಈ ಇ-ಕೆವೈಸಿ ಪ್ರಕ್ರಿಯೆಯನ್ನು ವಿಳಂಬ ಮಾಡದೆ ಪೂರ್ಣಗೊಳಿಸುವುದು ಅಗತ್ಯವಾಗಿದೆ.
ತಾಲೂಕಿನ ರೈತರು ತಮ್ಮ ಆಧಾರ್ ಕಾರ್ಡ್ ಮತ್ತು ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯೊಂದಿಗೆ ಸಮೀಪದ ಸಾಮಾನ್ಯ ಸೇವಾ ಕೇಂದ್ರಗಳು (ಸಿಎಸ್ಸಿ) ಅಥವಾ ಗ್ರಾಮ ಒನ್ ಕೇಂದ್ರಗಳಿಗೆ ಭೇಟಿ ನೀಡಿ ಬೆರಳಚ್ಚು ನೀಡುವುದರ ಮೂಲಕ ಬಯೋಮೆಟ್ರಿಕ್ ಇ-ಕೆವೈಸಿ ಮಾಡಿಸಿಕೊಳ್ಳಬಹುದು. ಒಂದು ವೇಳೆ ವೃದ್ಧರು ಅಥವಾ ಸಿಎಸ್ಸಿ ಕೇಂದ್ರಗಳಿಗೆ ತೆರಳಲು ಸಾಧ್ಯವಾಗದ ರೈತರು ಪಿಎಂ ಕಿಸಾನ್ ಮೊಬೈಲ್ ಆ್ಯಪ್ ಮೂಲಕ ಫೇಸ್ ಆಧಾರಿತ ಇ-ಕೆವೈಸಿ ಪೂರ್ಣಗೊಳಿಸಲು ಅವಕಾಶ ಕಲ್ಪಿಸಲಾಗಿದೆ. ಇ-ಕೆವೈಸಿ ಪೂರ್ಣಗೊಳಿಸದ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಮುಂದಿನ ಕಂತಿನ 2,000 ರೂ. ಹಣ ಜಮೆಯಾಗುವುದಿಲ್ಲ ಎಂದು ಕೃಷಿ ಇಲಾಖೆ ಸ್ಪಷ್ಟಪಡಿಸಿದೆ.


