
ಕಮಲಾಪುರ ತಾಲೂಕಿನ ಚೇಂಗಟಾ ಗ್ರಾಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ: ಪ್ರತಿಭಟನೆ, ಆರೋಪಿ ಬಂಧನ
ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಚೇಂಗಟಾ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ, ಮಹಾ ಮಾನವತಾವಾದಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರವನ್ನು ಕಿಡಿಗೇಡಿಗಳು ಹರಿದು ಹಾಕಿ ಅವಮಾನಿಸಿರುವ ಘಟನೆ ಗ್ರಾಮಸ್ಥರು ಹಾಗೂ ದಲಿತ ಪರ ಸಂಘಟನೆಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಸ್ಥಳೀಯರ ಪ್ರಕಾರ, ಸೆಪ್ಟೆಂಬರ್ 8ರ ರಾತ್ರಿ ಸುಮಾರು 10:30ರವರೆಗೆ ಭಾವಚಿತ್ರ ಯಥಾಸ್ಥಿತಿಯಲ್ಲಿದ್ದು, ತಡರಾತ್ರಿ ಯಾರೋ ದುಷ್ಕರ್ಮಿಗಳು ಅದನ್ನು ಹರಿದು ಹಾಕಿ ಹಾನಿಗೊಳಿಸಿರುವುದು ಸೆಪ್ಟೆಂಬರ್ 9ರ ಬೆಳಿಗ್ಗೆ ಬೆಳಕಿಗೆ ಬಂದಿದೆ.
ಘಟನೆ ತಿಳಿಯುತ್ತಿದ್ದಂತೆ ಅಂಬೇಡ್ಕರ್ ಸೇವಾ ಸಮಿತಿ ಕರ್ನಾಟಕದ ಕಲಬುರಗಿ ಜಿಲ್ಲಾ ಘಟಕ ಹಾಗೂ ಭೀಮ್ ಆರ್ಮಿ ಕಮಲಾಪುರ ತಾಲೂಕು ಘಟಕದ ಪದಾಧಿಕಾರಿಗಳು ಮತ್ತು ಗ್ರಾಮಸ್ಥರು ಚೇಂಗಟಾ ಗ್ರಾಮದಲ್ಲಿ ಸಭೇರಿ ತೀವ್ರ ಪ್ರತಿಭಟನೆ ನಡೆಸಿದರು. ರಸ್ತೆ ತಡೆದು ಧರಣಿ ನಡೆಸಿದ ಪ್ರತಿಭಟನಾಕಾರರು, ಸಾಮಾಜಿಕ ಶಾಂತಿ ಕದಡಲು ಯತ್ನಿಸಿದ ಹಾಗೂ ಸಮಾಜದ ಭಾವನೆಗಳಿಗೆ ಧಕ್ಕೆ ತಂದ ಕಿಡಿಗೇಡಿಗಳನ್ನು ತಕ್ಷಣ ಪತ್ತೆ ಹಚ್ಚಿ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಸ್ಥಳಕ್ಕೆ ಧಾವಿಸಿದ ಕಮಲಾಪುರ ಪೊಲೀಸ್ ಠಾಣೆಯ ಅಧಿಕಾರಿಗಳು ಪ್ರತಿಭಟನಾಕಾರರ ಮನವೊಲಿಸಿದರು. ತಕ್ಷಣ ಕ್ರಮ ಕೈಗೊಂಡ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಧಿಸಿದ್ದು, ಘಟನೆಯ ಹಿಂದಿನ ಉದ್ದೇಶದ ಕುರಿತು ವಿಸ್ತೃತ ತನಿಖೆ ನಡೆಸಲಾಗುತ್ತಿದೆ ಎಂದು ಭರವಸೆ ನೀಡಿದರು. ಕಮಲಾಪುರ ತಾಲೂಕಿನ ಸಾರ್ವಜನಿಕರು ಶಾಂತಿ ಮತ್ತು ಸೌಹಾರ್ದತೆ ಕಾಪಾಡಿಕೊಳ್ಳುವಂತೆ ಪೊಲೀಸ್ ಇಲಾಖೆ ಮನವಿ ಮಾಡಿದೆ.


