
ಕನಕಗಿರಿ ಹೊರವಲಯದಲ್ಲಿ ಚಿರತೆ ಪ್ರತ್ಯಕ್ಷ: ರೈತರು ಹಾಗೂ ಸ್ಥಳೀಯರಲ್ಲಿ ತೀವ್ರ ಆತಂಕ
ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕು ಕೇಂದ್ರದ ಹೊರವಲಯದಲ್ಲಿ ಬುಧವಾರ ತಡರಾತ್ರಿ ಚಿರತೆಯೊಂದು ಪ್ರತ್ಯಕ್ಷವಾಗಿದ್ದು, ಪಟ್ಟಣ ಹಾಗೂ ಸುತ್ತಮುತ್ತಲಿನ ರೈತರು ಮತ್ತು ಸಾರ್ವಜನಿಕರಲ್ಲಿ ತೀವ್ರ ಆತಂಕದ ವಾತಾವರಣ ನಿರ್ಮಾಣವಾಗಿದೆ. ಸ್ಥಳೀಯ ಮೂಲಗಳ ಪ್ರಕಾರ, ರಾತ್ರಿ ಸುಮಾರು 2 ಗಂಟೆಯ ವೇಳೆಗೆ ಸ್ಥಳೀಯ ರೈತ ಗುಂಡಪ್ಪ ಧನಕರ ಅವರ ಜಮೀನಿನಲ್ಲಿ ಚಿರತೆ ಕಾಣಿಸಿಕೊಂಡಿದೆ. ಹೊಲದಲ್ಲಿ ಕಟ್ಟಲಾಗಿದ್ದ ನಾಯಿಯ ಮೇಲೆ ಚಿರತೆ ದಾಳಿ ನಡೆಸಿದ್ದು, ಏಕಾಏಕಿ ಬಂದ ಚಿರತೆಯನ್ನು ಕಂಡು ಜಮೀನಿನಲ್ಲಿದ್ದ ಜಾನುವಾರುಗಳು ಗಾಬರಿಗೊಂಡು ಚದುರಿ ಓಡಿವೆ.
ಕಳೆದ ಕೆಲವು ದಿನಗಳಿಂದ ಈ ಭಾಗದಲ್ಲಿ ಚಿರತೆಯ ಸಂಚಾರವಿರಬಹುದು ಎಂದು ಗ್ರಾಮಸ್ಥರು ಶಂಕಿಸಿದ್ದರು. ಆದರೆ ಈಗ ನೇರವಾಗಿ ಚಿರತೆ ಕಾಣಿಸಿಕೊಂಡಿರುವುದರಿಂದ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ರೈತರು ಹಾಗೂ ರಾತ್ರಿ ವೇಳೆ ತೋಟಗಳಲ್ಲಿ ತಂಗುವ ಸ್ಥಳೀಯರು ಕಂಗಾಲಾಗಿದ್ದಾರೆ. ಈ ಕುರಿತು ಆತಂಕ ವ್ಯಕ್ತಪಡಿಸಿರುವ ಸ್ಥಳೀಯ ರೈತರಾದ ರಮೇಶ್, ದೊಡ್ಡಪ್ಪ ಕೊಡ್ಲಿ, ಮುದಿಯಪ್ಪ ಧನಕಾಯರ, ಹನುಮೇಶ ಹಾಗೂ ಹೊನ್ನಪ್ಪ, ಅರಣ್ಯ ಇಲಾಖೆ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಬೋನು ಅಳವಡಿಸಿ ಚಿರತೆಯನ್ನು ಸೆರೆಹಿಡಿಯಬೇಕೆಂದು ಒತ್ತಾಯಿಸಿದ್ದಾರೆ. ಚಿರತೆ ಸೆರೆಯಾಗುವವರೆಗೆ ರಾತ್ರಿ ವೇಳೆ ರೈತರು ಜಾನುವಾರುಗಳೊಂದಿಗೆ ಹೊಲಗಳಲ್ಲಿ ಇರದಂತೆ ಮುನ್ನೆಚ್ಚರಿಕೆ ವಹಿಸಲು ಸೂಕ್ತ ಸೂಚನೆ ನೀಡಬೇಕೆಂದು ಕೋರಿದ್ದಾರೆ.


