
ಕಾಪು ಕರಾವಳಿ ತೀರದ ಸುರಕ್ಷತೆ ಮತ್ತು ಕಡಲ್ಕೊರೆತ ತಡೆಗೆ ₹100 ಕೋಟಿ ಮಾಸ್ಟರ್ ಪ್ಲಾನ್: ಶಾಸಕ ಗುರ್ಮೆ ಸುರೇಶ್ ಶೆಟ್ಟಿ
ಕಾಪು ತಾಲೂಕಿನ ಕರಾವಳಿ ತೀರದಲ್ಲಿ ಎದುರಾಗುತ್ತಿರುವ ತೀವ್ರ ಕಡಲ್ಕೊರೆತ ತಡೆಯಲು ಹಾಗೂ ಕರಾವಳಿ ಸುರಕ್ಷತೆಗಾಗಿ 100 ಕೋಟಿ ರೂಪಾಯಿ ವೆಚ್ಚದ ಮಾಸ್ಟರ್ ಪ್ಲಾನ್ ಸಿದ್ಧಪಡಿಸಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ತಿಳಿಸಿದ್ದಾರೆ. ಕಟಪಾಡಿ ಸಮೀಪದ ಮಟ್ಟು ಬೀಚ್ ಪ್ರದೇಶದಲ್ಲಿ ಕಡಲ್ಕೊರೆತ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಅವರು ಈ ವಿಷಯ ಪ್ರಕಟಿಸಿದರು.
ಕಡಲ್ಕೊರೆತದ ಸಂದರ್ಭದಲ್ಲಿ ತುರ್ತು ಪರಿಹಾರ ಕಾಮಗಾರಿ ನಡೆಸುವುದು ತಾತ್ಕಾಲಿಕ ಪರಿಹಾರ ಮಾತ್ರವಾಗಿದ್ದು, ಇದರಿಂದ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುವುದಿಲ್ಲ ಎಂದು ಶಾಸಕರು ಹೇಳಿದರು. ಮಟ್ಟು ಬೀಚ್ ಭಾಗದಲ್ಲಿ ವೈಜ್ಞಾನಿಕವಾಗಿ ಶಾಶ್ವತ ತಡೆಗೋಡೆ ನಿರ್ಮಾಣಕ್ಕಾಗಿ 12 ಕೋಟಿ ರೂಪಾಯಿಗಳ ಪ್ರತ್ಯೇಕ ಯೋಜನೆಯನ್ನು ಕಳುಹಿಸಲಾಗಿದೆ. ಇದಲ್ಲದೆ, ಕಾಪು ಕ್ಷೇತ್ರದ ಹೆಜಮಾಡಿ, ಪಡುಬಿದ್ರಿ, ಕಾಪು, ಪೊಲಿಪು ಮತ್ತು ಕಟಪಾಡಿ-ಮಟ್ಟು ಭಾಗಗಳಲ್ಲಿ ಕಡಲ್ಕೊರೆತ ನಿಯಂತ್ರಿಸಲು ಉಡುಪಿ ಜಿಲ್ಲಾಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದ್ದಾರೆ.
ಬೆಂಗಳೂರು ಮಟ್ಟದಲ್ಲಿ ಸಂಬಂಧಪಟ್ಟ ಸಚಿವರು, ಹಿರಿಯ ಅಧಿಕಾರಿಗಳು ಹಾಗೂ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಈ ಯೋಜನೆಗೆ ತಕ್ಷಣ ಅನುಮೋದನೆ ದೊರಕಿಸಲು ಮತ್ತು ಪರಿಹಾರ ನಿಧಿಯಿಂದ ಅಗತ್ಯ ಅನುದಾನ ಬಿಡುಗಡೆಗೊಳಿಸಲು ಶ್ರಮಿಸುವುದಾಗಿ ಶಾಸಕರು ಭರವಸೆ ನೀಡಿದರು. ಪ್ರತಿ ಮಳೆಗಾಲದಲ್ಲೂ ಕಡಲ್ಕೊರೆತದಿಂದ ಭೀತಿ ಎದುರಿಸುತ್ತಿರುವ ಕಾಪು ತಾಲೂಕಿನ ಕರಾವಳಿ ನಿವಾಸಿಗಳಿಗೆ ಶಾಶ್ವತ ತಡೆಗೋಡೆ ನಿರ್ಮಾಣ ಯೋಜನೆಯು ಆಸ್ತಿಪಾಸ್ತಿ ಮತ್ತು ಜೀವನೋಪಾಯಕ್ಕೆ ರಕ್ಷಣೆ ನೀಡುವ ನಿರೀಕ್ಷೆಯಿದೆ.



Comments0
Loading comments…