
ಕರ್ನಾಟಕ ಮತ್ತು ಇಟಲಿ ನಡುವೆ ಸ್ಟಾರ್ಟ್ಅಪ್, ಎಐ ಹಾಗೂ ಡೀಪ್ಟೆಕ್ ಕ್ಷೇತ್ರಗಳಲ್ಲಿ ಸಹಭಾಗಿತ್ವಕ್ಕೆ ಚರ್ಚೆ
ಕರ್ನಾಟಕ ಸರ್ಕಾರದ ಎಲೆಕ್ಟ್ರಾನಿಕ್ಸ್, ಐಟಿ, ಬಿಟಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಇಟಲಿ ರಾಯಭಾರಿ ಆಂಟೋನಿಯೊ ಬಾರ್ಟೋಲಿ ಅವರೊಂದಿಗೆ ಬೆಂಗಳೂರಿನಲ್ಲಿ ಉನ್ನತ ಮಟ್ಟದ ದ್ವಿಪಕ್ಷೀಯ ಸಭೆ ನಡೆಸಿತು. ಐಟಿ-ಬಿಟಿ ಇಲಾಖೆಯ ಕಾರ್ಯದರ್ಶಿ ಡಾ. ಎನ್. ಮಂಜುಳಾ ಅವರ ನೇತೃತ್ವದಲ್ಲಿ ನಡೆದ ಈ ಮಾತುಕತೆಯಲ್ಲಿ, ಕರ್ನಾಟಕ ಹಾಗೂ ಇಟಲಿ ನಡುವೆ ತಂತ್ರಜ್ಞಾನ, ಎಐ, ಬಾಹ್ಯಾಕಾಶ ಮತ್ತು ಡೀಪ್ಟೆಕ್ ಕ್ಷೇತ್ರಗಳಲ್ಲಿ ಸಕ್ರಿಯ ಸಹಭಾಗಿತ್ವ ಬೆಳೆಸಲು ನಿರ್ಧರಿಸಲಾಯಿತು.
ಉಭಯ ಪ್ರದೇಶಗಳ ನವೋದ್ಯಮಗಳಿಗೆ ಸೂಕ್ತ ವೇದಿಕೆ ಒದಗಿಸಲು 3 ರಿಂದ 4 ಕ್ಷೇತ್ರ ಆಧಾರಿತ 'ಸ್ಟಾರ್ಟ್ಅಪ್ ಆಕ್ಸಲರೇಷನ್' ಕಾರ್ಯಕ್ರಮಗಳನ್ನು ರೂಪಿಸಲು ಉದ್ದೇಶಿಸಲಾಗಿದೆ. ಇದರೊಂದಿಗೆ, ಉಭಯ ದೇಶಗಳ ನವೋದ್ಯಮಗಳು ಪರಸ್ಪರ ಮಾರುಕಟ್ಟೆ, ಸಂಶೋಧನಾ ಸಂಸ್ಥೆಗಳು ಮತ್ತು ಕೈಗಾರಿಕಾ ಜಾಲಗಳನ್ನು ಸುಲಭವಾಗಿ ತಲುಪಲು 'ಸಾಫ್ಟ್-ಲ್ಯಾಂಡಿಂಗ್' ಸೌಲಭ್ಯಗಳನ್ನು ಒದಗಿಸಲು ಆಸಕ್ತಿ ವಹಿಸಲಾಗಿದೆ. ಈ ಸಹಭಾಗಿತ್ವವು ನಗರಾಡಳಿತ ಪರಿಹಾರಗಳು, ವಿಪತ್ತು ನಿರ್ವಹಣೆಗಾಗಿ ಭೂ ವೀಕ್ಷಣೆ ತಂತ್ರಜ್ಞಾನ ಹಾಗೂ ಕರ್ನಾಟಕದ ಮುಂಬರುವ ಎಐ ವಿಶ್ವವಿದ್ಯಾಲಯದ ಜತೆಗಿನ ಸಹಯೋಗವನ್ನೂ ಒಳಗೊಂಡಿದೆ. ಅಲ್ಲದೆ, ಮುಂಬರುವ 'ಬೆಂಗಳೂರು ಟೆಕ್ ಶೃಂಗಸಭೆ 2026'ರಲ್ಲಿ ಭಾಗವಹಿಸಲು ಇಟಲಿಯಿಂದ ಪ್ರತಿನಿಧಿ ನಿಯೋಗ ಆಗಮಿಸಲಿದೆ.


