
ಕೆ.ಆರ್.ಪೇಟೆ: ಬಿಲ್ಲೇನಹಳ್ಳಿ ಸರ್ಕಾರಿ ಶಾಲೆಯನ್ನು ಮುಚ್ಚದಂತೆ ಉಳಿಸಿದ ಶಿಕ್ಷಕಿ ರೂಪಾ ಸಾಹಸ
ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಗವಿರಂಗನಾಥಸ್ವಾಮಿ ಬೆಟ್ಟದ ಸನ್ನಿಧಿಯಲ್ಲಿರುವ ಬಿಲ್ಲೇನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯು ಮುಚ್ಚುವ ಭೀತಿಯಿಂದ ಪಾರಾಗಿ ಹೊಸ ಆಶಾದಾಯಕ ಅಧ್ಯಾಯಕ್ಕೆ ಸಾಕ್ಷಿಯಾಗಿದೆ. ೨೦೨೩ರಲ್ಲಿ ಶಾಲೆಯಲ್ಲಿ ಕೇವಲ ೬ ವಿದ್ಯಾರ್ಥಿಗಳು ಮಾತ್ರ ಉಳಿದುಕೊಂಡಿದ್ದು, ಶಾಲೆಯನ್ನು ಮುಚ್ಚಲಾಗುವುದು ಎಂಬ ಮೇಲಧಿಕಾರಿಗಳ ಎಚ್ಚರಿಕೆಯು ಗ್ರಾಮಸ್ಥರಲ್ಲಿ ಕಳವಳ ಮೂಡಿಸಿತ್ತು.
ಚಿಕ್ಕಮಗಳೂರು ಜಿಲ್ಲೆಯ ಮೂಲದ ಶಿಕ್ಷಕಿ ರೂಪಾ ಅವರು ೨೦೨೩ರಲ್ಲಿ ಕೌನ್ಸಿಲಿಂಗ್ ಮೂಲಕ ಈ ಶಾಲೆಗೆ ಸ್ವಯಂಪ್ರೇರಿತರಾಗಿ ವರ್ಗಾವಣೆಯಾಗಿ ಬಂದರು. ಶಾಲೆ ಮುಚ್ಚುವುದನ್ನು ತಡೆಯುವ ಸಂಕಲ್ಪ ಮಾಡಿದ ಅವರು, ಬಿಲ್ಲೇನಹಳ್ಳಿ ಗ್ರಾಮದ ಪ್ರತಿ ಮನೆಗೂ ಭೇಟಿ ನೀಡಿ ಪೋಷಕರೊಂದಿಗೆ ಸುದೀರ್ಘ ಸಂವಾದ ನಡೆಸಿದರು. ಪೋಷಕರು ಇಂಗ್ಲಿಷ್ ಮಾಧ್ಯಮದ ಶಿಕ್ಷಣದ ಕಡೆಗೆ ಒಲವು ತೋರುತ್ತಿರುವುದನ್ನು ಅರಿತ ರೂಪಾ, ಸರ್ಕಾರಿ ಶಾಲೆಯಲ್ಲೇ ಅಚ್ಚುಕಟ್ಟಾಗಿ ಇಂಗ್ಲಿಷ್ ಕಲಿಸುವುದಾಗಿ ಭರವಸೆ ನೀಡಿ ಪೋಷಕರ ವಿಶ್ವಾಸಗಳಿಸಿದರು.
ಮುಖ್ಯ ಶಿಕ್ಷಕ ಮಹೇಶ್ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಪ್ರೋತ್ಸಾಹ ಹಾಗೂ ಗ್ರಾಮದ ದಾನಿಗಳ ಸಹಕಾರದಿಂದ ಶಾಲೆಯ ಪರಿಸರವೇ ಬದಲಾಗಿದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಮತ್ತು ಇಂಗ್ಲಿಷ್ ಸಂಭಾಷಣೆ ತರಬೇತಿ ನೀಡಿದ ಪರಿಣಾಮವಾಗಿ ೨೦೨೬ರ ಶೈಕ್ಷಣಿಕ ಸಾಲಿನಲ್ಲಿ ಶಾಲೆಯ ವಿದ್ಯಾರ್ಥಿಗಳ ಸಂಖ್ಯೆ ೧೬ಕ್ಕೆ ಏರಿಕೆಯಾಗಿದೆ. ಪ್ರಸ್ತುತ ಶಾಲೆಯ ಮಕ್ಕಳು ಇಂಗ್ಲಿಷ್ನಲ್ಲಿ ಸಲೀಸಾಗಿ ಮಾತನಾಡುತ್ತಿದ್ದು, ಶಾಲೆಗೆ ಬರುವ ಅಧಿಕಾರಿಗಳನ್ನು ಸ್ವತಃ ಸ್ವಾಗತಿಸುತ್ತಿದ್ದಾರೆ.
ಕೆ.ಆರ್.ಪೇಟೆ ತಾಲೂಕಿನ ಸಾರ್ವಜನಿಕರಿಗೆ ಮತ್ತು ಪೋಷಕರಿಗೆ ಈ ಘಟನೆಯು ಅತ್ಯಂತ ಸ್ಪೂರ್ತಿದಾಯಕವಾಗಿದ್ದು, ಶಿಕ್ಷಕರ ಬದ್ಧತೆ ಹಾಗೂ ಸಮಾಜದ ಸಹಭಾಗತ್ವದಿಂದ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳನ್ನು ಪುನರುಜ್ಜೀವನಗೊಳಿಸಬಹುದು ಎಂಬುದನ್ನು ಸಾಬೀತುಪಡಿಸಿದೆ.


