
ಕೆ.ಆರ್. ಪುರಂನಲ್ಲಿ ಎಸ್ಐಆರ್ ಮತದಾರರ ಪಟ್ಟಿ ಪರಿಷ್ಕರಣೆ ವಿಚಾರಣೆ ಆರಂಭ: ಜಾಗೃತಿ ಜಾಥಾಗೆ ಚಾಲನೆ
ಕೃಷ್ಣರಾಜಪುರ (ಕೆ.ಆರ್. ಪುರಂ) ತಾಲೂಕಿನಲ್ಲಿ ಮತದಾರರ ಪಟ್ಟಿಯ ವಿಶೇಷ ಸಾಂದ್ರ ಪರಿಷ್ಕರಣೆ (ಎಸ್ಐಆರ್-2026) ಪ್ರಕರಣಗಳ ವಿಚಾರಣೆ ಪ್ರಕ್ರಿಯೆಯು ಅಧಿಕೃತವಾಗಿ ಪ್ರಾರಂಭವಾಗಿದೆ. ಆಗಸ್ಟ್ 5 ರಂದು ಕರಡು ಮತದಾರರ ಪಟ್ಟಿ ಪ್ರಕಟಗೊಂಡ ನಂತರ, 'ಮ್ಯಾಪಿಂಗ್ ಆಗದಿರುವ' ಮತ್ತು ಮಾಹಿತಿ ವ್ಯತ್ಯಾಸವಿರುವ ಮತದಾರರ ದಾಖಲೆಗಳನ್ನು ಸರಿಪಡಿಸಲು ಈ ಪ್ರಕ್ರಿಯೆ ಕೈಗೊಳ್ಳಲಾಗಿದೆ. ಕೆ.ಆರ್. ಪುರಂ ಕ್ಷೇತ್ರದಲ್ಲಿ ಸಾರ್ವಜನಿಕ ಜಾಗೃತಿ ಮೂಡಿಸಲು ಬೆಂಗಳೂರು ಉತ್ತರ ನಗರ ಪಾಲಿಕೆ ಆಯುಕ್ತ ಹಾಗೂ ಹೆಚ್ಚುವರಿ ಜಿಲ್ಲ ಜಿಲ್ಲಾ ಚುನಾವಣಾಧಿಕಾರಿ ಪೊಮ್ಮಲ ಸುನಿಲ್ ಕುಮಾರ್ ಅವರು ಪ್ರಚಾರ ಆಟೋಗಳಿಗೆ ಚಾಲನೆ ನೀಡಿ, ವಿಚಾರಣಾ ಕೇಂದ್ರಗಳ ವ್ಯವಸ್ಥೆಯನ್ನು ಪರಿಶೀಲಿಸಿದರು.
ವಿಚಾರಣೆ ಪ್ರಕ್ರಿಯೆಯಲ್ಲಿ ಮತದಾರರ ನೋಂದಣಾಧಿಕಾರಿಗಳು ಸಾರ್ವಜನಿಕರಿಂದ ಸ್ವೀಕರಿಸಿದ ದಾಖಲೆಗಳನ್ನು ಪರಿಶೀಲಿಸಿ, ಮತದಾರರ ವಾಸಸ್ಥಳ ಮತ್ತು ಗುರುತನ್ನು ದೃಢೀಕರಿಸುತ್ತಿದ್ದಾರೆ. ಮತದಾರರಿಗೆ ಅಗತ್ಯ ದಿನಾಂಕಗಳು, ವಿಚಾರಣಾ ಸ್ಥಳಗಳು ಹಾಗೂ ಆಧಾರ್ ಕಾರ್ಡ್, ವಿಳಾಸ ಪುರಾವೆಗಳಂತಹ ಅಗತ್ಯ ದಾಖಲೆಗಳ ಕುರಿತು ಮಾಹಿತಿ ನೀಡಲು ಕೆ.ಆರ್. ಪುರಂನ ವಿವಿಧ ಭಾಗಗಳಲ್ಲಿ ಜಾಗೃತಿ ಜಾಥಾಗಳನ್ನು ನಡೆಸಲಾಯಿತು.
ಕೃಷ್ಣರಾಜಪುರ ತಾಲೂಕಿನ ನಿವಾಸಿಗಳಿಗೆ ಈ ಎಸ್ಐಆರ್ ಪ್ರಕ್ರಿಯೆಯು ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ಕಾಯ್ದುಕೊಳ್ಳಲು ಅತ್ಯಂತ ಮುಖ್ಯವಾಗಿದೆ. ಯಾವುದೇ ಅರ್ಹ ಮತದಾರರ ಹೆಸರು ಪಟ್ಟಿಯಿಂದ ಕೈಬಿಟ್ಟು ಹೋಗದಂತೆ, ಹಿರಿಯ ನಾಗರಿಕರು ಮತ್ತು ಸ್ಥಳೀಯ ನಿವಾಸಿಗಳು ತಮಗೆ ನೀಡಲಾದ ನೋಟಿಸ್ಗಳೊಂದಿಗೆ ನಿಗದಿತ ಕೇಂದ್ರಗಳಿಗೆ ಭೇಟಿ ನೀಡಿ ದಾಖಲೆಗಳನ್ನು ಸಲ್ಲಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.


