
ಕೆಸಿಇಟಿ ಅಭ್ಯರ್ಥಿಗಳಿಗೆ ಕೆಇಎ ಎಚ್ಚರಿಕೆ: 'ಚಾಯ್ಸ್ 4' ಆಯ್ಕೆ ಮತ್ತು ಸೀಟು ರದ್ದತಿಗೆ ಭಾರೀ ದಂಡ
ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಕೆಸಿಇಟಿ) 2026ರ ಮೂರನೇ ಸುತ್ತಿನ ಕೌನ್ಸಿಲಿಂಗ್ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಿರುವ ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಪ್ರಮುಖ ಎಚ್ಚರಿಕೆಯೊಂದನ್ನು ನೀಡಿದೆ. ಭವಿಷ್ಯದ ಶೈಕ್ಷಣಿಕ ಮತ್ತು ಆರ್ಥಿಕ ನಷ್ಟವನ್ನು ತಡೆಗಟ್ಟಲು ಅಭ್ಯರ್ಥಿಗಳು ಪ್ರವೇಶ ಪ್ರಕ್ರಿಯೆಯಲ್ಲಿ ಅತ್ಯಂತ ಜಾಗರೂಕರಾಗಿ ಆಯ್ಕೆಗಳನ್ನು ನಮೂದಿಸಬೇಕು ಎಂದು ಸೂಚಿಸಲಾಗಿದೆ. ಕೌನ್ಸಿಲಿಂಗ್ ಅಂತಿಮ ಹಂತಕ್ಕೆ ತಲುಪುತ್ತಿದ್ದಂತೆ ನಿಯಮಗಳನ್ನು ಮತ್ತಷ್ಟು ಕಠಿಣಗೊಳಿಸಲಾಗಿದ್ದು, ವಿದ್ಯಾರ್ಥಿಗಳು ಯಾವುದೇ ಗೊಂದಲಕ್ಕೆ ಒಳಗಾಗದಂತೆ ಪ್ರಾಧಿಕಾರ ಸೂಚನೆ ಹೊರಡಿಸಿದೆ.
ಕೆಇಎ ನೀಡಿದ ವಿವರಣೆ ಪ್ರಕಾರ, ಅಭ್ಯರ್ಥಿಯು 'ಚಾಯ್ಸ್ 4' (Choice 4) ಆಯ್ಕೆಯನ್ನು ಆರಿಸಿಕೊಂಡರೆ, ಅವರು ಪ್ರವೇಶ ಪ್ರಕ್ರಿಯೆಯಿಂದ ಸಂಪೂರ್ಣವಾಗಿ ನಿರ್ಗಮಿಸುತ್ತಾರೆ ಎಂದರ್ಥ. ಅಂತಹ ಅಭ್ಯರ್ಥಿಗಳಿಗೆ ಮುಂದಿನ ಯಾವುದೇ ಸುತ್ತಿನ ಸೀಟು ಹಂಚಿಕೆಯಲ್ಲಿ ಪಾಲ್ಗೊಳ್ಳಲು ಅವಕಾಶವಿರುವುದಿಲ್ಲ. ಇದಲ್ಲದೆ, ಪ್ರಮುಖ ಸುತ್ತಿನಲ್ಲಿ ಸೀಟು ಹಂಚಕೆಯಾದ ನಂತರ ಅಥವಾ ಸೀಟನ್ನು ಖಚಿತಪಡಿಸಿಕೊಂಡ ನಂತರ ಪ್ರವೇಶ ಪಡೆಯದೆ ಸೀಟನ್ನು ತ್ಯಜಿಸಿದರೆ (Seat Surrender) ಭಾರೀ ಆರ್ಥಿಕ ದಂಡ ವಿಧಿಸಲಾಗುವುದು ಎಂದು ಕೆಇಎ ಎಚ್ಚರಿಸಿದೆ. ನಿಯಮಾವಳಿಗಳ ಪ್ರಕಾರ ನಿಯಮಿತ ಅವಧಿಯೊಳಗೆ ಪ್ರವೇಶ ಪ್ರಕ್ರಿಯೆ ಪೂರ್ಣಗೊಳಿಸದಿದ್ದರೆ ಅಥವಾ ಸೀಟು ರದ್ದುಪಡಿಸುವ ಗಡುವಿನ ನಂತರ ಸೀಟು ತೊರೆದರೆ, ಕಾಲೇಜು ಶುಲ್ಕದ ಐದು ಪಟ್ಟು (5X Penalty) ವರೆಗೆ ದಂಡ ತೆರಬೇಕಾಗುತ್ತದೆ. ಮೆರಿಟ್ ಆಧಾರಿತ ಸೀಟುಗಳು ವ್ಯರ್ಥವಾಗುವುದನ್ನು ತಡೆಯಲು ಮತ್ತು ಇತರ ಅರ್ಹ ವಿದ್ಯಾರ್ಥಿಗಳಿಗೆ ನ್ಯಾಯಯುತ ಅವಕಾಶ ಸಿಗುವಂತೆ ಮಾಡಲು ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


