
ಕೂಡ್ಲಿಗಿಯಲ್ಲಿ 'ಪ್ರಜಾಸೇವಾ' ಅಭಿಯಾನಕ್ಕೆ ಸಿಎಂ ಚಾಲನೆ: ಸರ್ಕಾರಿ ಶಾಲಾ ಮಕ್ಕಳಿಗೆ ಶೇ. 7.5 ಮೀಸಲಾತಿ ಘೋಷಣೆ
ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದ ಗುಡೇಕೋಟೆ ರಸ್ತೆ ಬಳಿ ಶಾಸಕರ ಕಚೇರಿ ಮುಂಭಾಗ ನಡೆದ ಬೃಹತ್ ಸಮಾರಂಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ 'ಪ್ರಜಾಸೇವಾ' ಅಭಿಯಾನಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು. ಸಾರ್ವಜನಿಕರ ಕುಂದು-ಕೊರತೆಗಳನ್ನು ಆಲಿಸಿ ಸ್ಥಳದಲ್ಲೇ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕೂಡ್ಲಿಗಿ ತಾಲೂಕಿನ 30ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳಿಂದ ಆಡಳಿತಾತ್ಮಕ ಸ್ಟಾಲ್ಗಳನ್ನು ಸ್ಥಾಪಿಸಲಾಗಿತ್ತು. ಸ್ಥಳೀಯ ಶಾಸಕ ಡಾ. ಎನ್.ಟಿ. ಶ್ರೀನಿವಾಸ್, ಸಂಸದೆ ಪ್ರಭಾ ಮಲ್ಲಿಕಾರ್ಜುನ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸೇರಿದಂತೆ ಹಲವು ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕೂಡ್ಲಿಗಿಯಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ಸಾರ್ವಜನಿಕರು ತಮ್ಮ ಕೆಲಸಗಳಿಗಾಗಿ ಸರ್ಕಾರಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಿ, ಆಡಳಿತವೇ ನೇರವಾಗಿ ಜನರ ಮನೆಬಾಗಿಲಿಗೆ ತಲುಪುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದರು. ಗ್ರಾಮೀಣ ಭಾಗದ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಮತ್ತು ಉದ್ಯೋಗಾವಕಾಶಗಳಲ್ಲಿ ಶೇಕಡಾ 7.5 ರಷ್ಟು ಆಂತರಿಕ ಮೀಸಲಾತಿ ಕಲ್ಪಿಸುವ ಪ್ರಸ್ತಾವನೆಯನ್ನು ಅವರು ಈ ಸಂದರ್ಭದಲ್ಲಿ ಘೋಷಿಸಿದರು. ಜೊತೆಗೆ, ವೈದ್ಯರು ಮತ್ತು ಪ್ರಾಧ್ಯಾಪಕರಂತೆ ಶಾಲಾ ಶಿಕ್ಷಕರಿಗೂ ಗೌರವ ನೀಡಲು ಅವರ ಹೆಸರುಗಳ ಮುಂದೆ 'Tr.' (ಟೀಚರ್) ಎಂಬ ಗೌರವಸೂಚಕ ಪದ ಬಳಸುವ ಹೊಸ ಸಂಪ್ರದಾಯ ಜಾರಿಗೆ ತರಲಾಗುವುದು ಎಂದು ತಿಳಿಸಿದರು.
ಕೂಡ್ಲಿಗಿ ತಾಲೂಕಿನಲ್ಲಿ 'ಭೂಮಿ ಗ್ಯಾರಂಟಿ' ಯೋಜನೆಯಡಿ ಈಗಾಗಲೇ 25,276 ಜನರಿಗೆ ಹಕ್ಕುಪತ್ರ ಹಾಗೂ ಇ-ಖಾತೆ ದಾಖಲೆಗಳನ್ನು ತಲುಪಿಸಲಾಗಿದೆ ಎಂದು ಸಿಎಂ ಮಾಹಿತಿ ನೀಡಿದರು. ಈ ಪ್ರಜಾಸೇವಾ ಅಭಿಯಾನವು ಕೂಡ್ಲಿಗಿ ತಾಲೂಕಿನ ನಾಗರಿಕರಿಗೆ ಸರ್ಕಾರಿ ಸೇವೆಗಳು ಮತ್ತು ಕಲ್ಯಾಣ ಯೋಜನೆಗಳನ್ನು ಸುಲಭವಾಗಿ ಪಡೆಯಲು ಸಹಕಾರಿಯಾಗಿದೆ.


