
ಕೊಟ್ಟೂರು ತಾಲೂಕಿನ ಹ್ಯಾಳ್ಯಾ ಗ್ರಾಮದ ಮೊದಲನೇ ರೈಲ್ವೆ ಗೇಟ್ ಮುಚ್ಚುವುದಕ್ಕೆ ರೈತರ ಆಕ್ಷೇಪ
ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಹ್ಯಾಳ್ಯಾ ಗ್ರಾಮದ ರೈತರು ಗ್ರಾಮದ ಮೊದಲನೇ ರೈಲ್ವೆ ಗೇಟ್ ಅನ್ನು ಶಾಶ್ವತವಾಗಿ ಮುಚ್ಚುವ ರೈಲ್ವೆ ಇಲಾಖೆಯ ಪ್ರಸ್ತಾಪದ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿ ರೈಲ್ವೆ ಗೇಟ್ ಬಳಿ ಜಮಾಯಿಸಿ ಪ್ರತಿಭಟನೆ ನಡೆಸಿದರು. ಈ ದಾಟುಗೇಟ್ ಮುಚ್ಚಲ್ಪಟ್ಟರೆ ತಮ್ಮ ಕೃಷಿ ಜಮೀನುಗಳಿಗೆ ತೆರಳಲು ಹಾಗೂ ಟ್ರ್ಯಾಕ್ಟರ್, ಎತ್ತಿನ ಬಂಡಿ ಮತ್ತು ಕೃಷಿ ಉಪಕರಣಗಳನ್ನು ಕೊಂಡೊಯ್ಯಲು ತೀವ್ರ ತೊಂದರೆಯಾಗಲಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದರು.
ಸ್ಥಳೀಯ ಮುಖಂಡರಾದ ಟಿಎಪಿಸಿಎಂಎಸ್ ಅಧ್ಯಕ್ಷ ಕೆ.ಎಸ್. ಈಶ್ವರಗೌಡ, ರೈತರಾದ ಬಡಿಗೇರ ಕೊಟ್ರೇಶ, ಕೊನಾಪುರ ಚಿಕ್ಕೀರಪ್ಪ, ದೇವಿಸಿದ್ದಪ್ಪರ ಬಸವರಾಜ್ ಹಾಗೂ ಕೊಟ್ರೇಶ್ ನೇತೃತ್ವದಲ್ಲಿ ಗ್ರಾಮಸ್ಥರು ಸ್ಥಳದಲ್ಲಿ ಸಭೆ ಸೇರಿ ಸಂಚಾರ ತಡೆಯುವ ಕ್ರಮವನ್ನು ವಿರೋಧಿಸಿದರು. ಸೂಕ್ತ ಪರ್ಯಾಯ ರಸ್ತೆ ಅಥವಾ ಅಂಡರ್ಪಾಸ್ ನಿರ್ಮಿಸದೇ ಏಕಾಏಕಿ ಗೇಟ್ ಮುಚ್ಚಿದರೆ ನೂರಾರು ಎಕರೆ ಜಮೀನುಗಳಿಗೆ ಸಂಪರ್ಕ ಕಡಿತಗೊಂಡು ಕೃಷಿ ಚಟುವಟಿಕೆಗಳಿಗೆ ಅಡಚಣೆಯಾಗಲಿದೆ ಎಂದು ಅವರು ಸ್ಪಷ್ಟಪಡಿಸಿದರು.
ರೈಲ್ವೆ ಇಲಾಖೆಯ ಅಧಿಕಾರಿಗಳು ಈ ಗೇಟ್ ಮುಚ್ಚುವ ಆಲೋಚನೆಯನ್ನು ತಕ್ಷಣವೇ ಕೈಬಿಟ್ಟು ರೈತರ ಸುಲಭ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಲಾಯಿತು. ಒಂದು ವೇಳೆ ರೈತರ ಬೇಡಿಕೆಯನ್ನು ನಿರ್ಲಕ್ಷಿಸಿ ಗೇಟ್ ಮುಚ್ಚಲು ಮುಂದಾದರೆ ತಾಲೂಕು ಮಟ್ಟದಲ್ಲಿ ತೀವ್ರ ಹೋರಾಟ ರೂಪಿಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.


