
ಕುಕನೂರು ಪಟ್ಟಣ ಪಂಚಾಯತ್ ಸಭೆಯಲ್ಲಿ ಅಮೃತ್ 2.0 ಕಾಮಗಾರಿ ವಿರುದ್ಧ ಸದಸ್ಯರ ಆಕ್ರೋಶ
ಕುಕನೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪಟ್ಟಣ ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ಅಮೃತ್ 2.0 ಯೋಜನೆ ಸೇರಿದಂತೆ ಪಟ್ಟಣದ ವಿವಿಧ ಮೂಲಭೂತ ಸೌಕರ್ಯ ಕಾಮಗಾರಿಗಳ ಕುರಿತು ಜನಪ್ರತಿನಿಧಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಯೋಜನೆಯ ಕಾಮಗಾರಿಗಳ ಮಂದಗತಿ ಮತ್ತು ಪ್ರಗತಿಯ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಸದಸ್ಯರು, ಹಿಂದಿನ ಸಭೆಗಳಲ್ಲಿ ಚರ್ಚಿಸಲಾದ ಕಾಮಗಾರಿಗಳ ಪೈಕಿ ಪೂರ್ಣಗೊಂಡ ಹಾಗೂ ಬಾಕಿ ಉಳಿದಿರುವ ಕೆಲಸಗಳ ಸ್ಪಷ್ಟ ವಿವರಗಳನ್ನು ನೀಡುವಂತೆ ಅಧಿಕಾರಿಗಳನ್ನು ಒತ್ತಾಯಿಸಿದರು.
ಸಭೆಯಲ್ಲಿ ಪಟ್ಟಣದ ಹಲವು ವಾರ್ಡ್ಗಳಲ್ಲಿ ತಲೆದೋರಿರುವ ತೀವ್ರ ಕುಡಿಯುವ ನೀರಿನ ಸಮಸ್ಯೆ, ಕಸ ವಿಲೇವಾರಿ ಹಾಗೂ ಚರಂಡಿ ಸ್ವಚ್ಛತೆಯ ಕುರಿತು ವಿಸ್ತೃತ ಚರ್ಚೆ ನಡೆಯಿತು. ನೀರಿನ ಅಭಾವ ಎದುರಿಸುತ್ತಿರುವ ಪ್ರದೇಶಗಳಿಗೆ ಕೈಗೊಂಡಿರುವ ಪರ್ಯಾಯ ವ್ಯವಸ್ಥೆಗಳ ಕುರಿತು ಸಂಬಂಧಿಸಿದ ಅಧಿಕಾರಿಗಳಿಂದ ಸದಸ್ಯರು ವಿವರಣೆ ಪಡೆದರು. ಕೆಇಬಿ ಕಾಲನಿ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಚರಂಡಿಗಳು ಬ್ಲಾಕ್ ಆಗಿ ಅಸ್ವಚ್ಛತೆ ಹೆಚ್ಚುತ್ತಿರುವುದು ಹಾಗೂ ಹಂದಿ, ನಾಯಿಗಳ ಹಾವಳಿಯಿಂದ ಸಾರ್ವಜನಿಕರು ಎದುರಿಸುತ್ತಿರುವ ತೊಂದರೆಗಳನ್ನು ಸಭೆಯ ಗಮನಕ್ಕೆ ತರಲಾಯಿತು.
ಸಮಸ್ಯೆಗಳಿಗೆ ಕೇವಲ ಭರವಸೆ ನೀಡದೆ ಸ್ಥಳದಲ್ಲೇ ಪರಿಹಾರ ಕಲ್ಪಿಸಬೇಕು ಎಂದು ಪಟ್ಟು ಹಿಡಿದ ಸದಸ್ಯರು, ಅಮೃತ್ 2.0 ಕುಡಿಯುವ ನೀರಿನ ಯೋಜನೆಯ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಲು ಆಗ್ರಹಿಸಿದರು. ಕುಕನೂರು ಪಟ್ಟಣದ ನಾಗರಿಕರಿಗೆ ಶುದ್ಧ ಕುಡಿಯುವ ನೀರು, ಉತ್ತಮ ಚರಂಡಿ ಮತ್ತು ನೈರ್ಮಲ್ಯ ವ್ಯವಸ್ಥೆ ಕಲ್ಪಿಸಲು ಪಟ್ಟಣ ಪಂಚಾಯಿತಿ ಆಡಳಿತ ಶ್ರಮಿಸಬೇಕಿದೆ ಎಂದು ಸದಸ್ಯರು ಒತ್ತಾಯಿಸಿದರು.


