
ಮಾಧ್ಯಮ ವರದಿ ಬೆನ್ನಲ್ಲೇ ಚಿಂಚೋಳಿಯ ಕುಂಚಾವರಂ ಮಾರುಕಟ್ಟೆ ಸ್ವಚ್ಛತೆ
ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಗಡಿ ಭಾಗದ ಪ್ರಮುಖ ವಾಣಿಜ್ಯ ಕೇಂದ್ರವಾದ ಕುಂಚಾವರಂ ಗ್ರಾಮದ ಮಾರುಕಟ್ಟೆಯಲ್ಲಿದ್ದ ಕಸದ ರಾಶಿಯನ್ನು ಗ್ರಾಮ ಪಂಚಾಯಿತಿ ಸಿಬ್ಬಂದಿ ಸೋಮವಾರ ಸಮಾರೋಪಾದಿಯಲ್ಲಿ ಸ್ವಚ್ಛಗೊಳಿಸಿದ್ದಾರೆ. ಮಾರುಕಟ್ಟೆ ಆವರಣದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ, ಕೊಳೆತ ತರಕಾರಿ ಹಾಗೂ ಇತರೆ ಕಸ ಸಂಗ್ರಹವಾಗಿ ದುರ್ವಾಸನೆ ಉಂಟಾಗಿದ್ದು, ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿ ವ್ಯಾಪಾರಿಗಳು ಮತ್ತು ಗ್ರಾಹಕರು ವ್ಯಾಪಾರ ನಡೆಸುವ ಸ್ಥಿತಿ ನಿರ್ಮಾಣವಾಗಿತ್ತು.
ಈ ಕುರಿತು ಮಾಧ್ಯಮಗಳಲ್ಲಿ ವರದಿ ಪ್ರಕಟವಾದ ಬೆನ್ನಲ್ಲೇ ಎಚ್ಚೆತ್ತುಕೊಂಡ ಕುಂಚಾವರಂ ಗ್ರಾಮ ಪಂಚಾಯಿತಿ ಅಧಿಕಾರಿಗಳ ಬಳಗ, ಮಾರುಕಟ್ಟೆಯಲ್ಲಿ ವಿಶೇಷ ಸ್ವಚ್ಛತಾ ಅಭಿಯಾನ ಕೈಗೊಂಡಿತು. ಮಾರುಕಟ್ಟೆಯ ಮೂಲೆ ಮೂಲೆಗಳಲ್ಲಿ ಬಿದ್ದಿದ್ದ ತ್ಯಾಜ್ಯ ಹಾಗೂ ಪ್ಲಾಸ್ಟಿಕ್ ವಸ್ತುಗಳನ್ನು ಸಿಬ್ಬಂದಿ ತೆರವುಗೊಳಿಸಿ ಸುಚಿತ್ವ ಕಾಪಾಡಿದ್ದಾರೆ.
ಇದರಿಂದಾಗಿ ಹಲವು ದಿನಗಳಿಂದ ದುರ್ವಾಸನೆ ಮತ್ತು ಅಸ್ವಚ್ಛತೆಯಿಂದ ನರಳುತ್ತಿದ್ದ ವ್ಯಾಪಾರಿಗಳು ಹಾಗೂ ಸ್ಥಳೀಯ ಗ್ರಾಹಕರು ನಿಟ್ಟುಸಿರು ಬಿಟ್ಟಿದ್ದು, ಪಂಚಾಯಿತಿ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


