
ಮಡಿಕೇರಿ: ಅಡಿಕೆ ಹಾಳೆ ತಟ್ಟೆ ಹಾಗೂ ಪೇಪರ್ ಕಪ್ ಬಳಕೆ ನಿಷೇಧಿಸಿ ನಗರಸಭೆ ಆದೇಶ
ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿ ತ್ಯಾಜ್ಯ ಸಂಸ್ಕರಣೆ ಮತ್ತು ನೈರ್ಮಲ್ಯ ಸವಾಲುಗಳನ್ನು ಎದುರಿಸಲು ನಗರಸಭೆಯು ಅಡಿಕೆ ಹಾಳೆ ತಟ್ಟೆ, ಪೇಪರ್ ಕಪ್, ಪೇಪರ್ ಪ್ಲೇಟ್ ಹಾಗೂ ಏಕಬಳಕೆಯ ಆಹಾರ ಕಂಟೇನರ್ಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿ ಅಧಿಕೃತ ಆದೇಶ ಹೊರಡಿಸಿದೆ. ಈ ಪೇಪರ್ ಕಪ್ ಮತ್ತು ಹಾಳೆ ತಟ್ಟೆಗಳು ಸುಲಭವಾಗಿ ಕರಗದಿರುವುದರಿಂದ ಕಸ ವಿಲೇವಾರಿ ಕೇಂದ್ರಗಳಲ್ಲಿ ಸಂಗ್ರಹವಾಗಿ ವಿಲೇವಾರಿಗೆ ದೊಡ್ಡ ಸಮಸ್ಯೆಯಾಗುತ್ತಿದೆ ಮತ್ತು ಚರಂಡಿಗಳಲ್ಲಿ ಸಿಲುಕಿ ನೀರು ಹರಿಯಲು ಅಡಚಣೆ ಉಂಟುಮಾಡುತ್ತಿದೆ ಎಂದು ನಗರಸಭೆ ಆಡಳಿತ ತಿಳಿಸಿದೆ. ಪ್ರವಾಸಿಗರು ಮತ್ತು ವ್ಯಾಪಾರಿಗಳು ಎಲ್ಲೆಂದರಲ್ಲಿ ಎಸೆಯುವುದರಿಂದ ನಗರದ ನೈರ್ಮಲ್ಯಕ್ಕೆ ಧಕ್ಕೆಯಾಗುತ್ತಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಆದರೆ, ನಗರಸಭೆಯ ಈ ಏಕಾಏಕಿ ನಿಷೇಧದ ನಿರ್ಧಾರಕ್ಕೆ ಸ್ಥಳೀಯ ವ್ಯಾಪಾರಿ ಸಮುದಾಯದಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ನಿರ್ದೇಶಕ ಎಂ. ಧನಂಜಯ್ ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿ ನಗರಸಭೆಯ ನಿರ್ಧಾರವನ್ನು ಖಂಡಿಸಿದ್ದಾರೆ. ಮಡಿಕೇರಿ ಪ್ರಮುಖ ಪ್ರವಾಸೋದ್ಯಮ ಕೇಂದ್ರವಾಗಿದ್ದು, ಪ್ರತಿದಿನ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಇಂತಹ ಸಂದರ್ಭದಲ್ಲಿ ಪರ್ಯಾಯ ನೈರ್ಮಲ್ಯ ವ್ಯವಸ್ಥೆ ಮತ್ತು ಸಮರ್ಪಕ ತ್ಯಾಜ್ಯ ನಿರ್ವಹಣಾ ಘಟಕಗಳನ್ನು ಸ್ಥಾಪಿಸುವ ಬದಲು, ಸಾರ್ವಜನಿಕರಿಗೆ ಹಾಗೂ ಹೋಟೆಲ್ ಉದ್ಯಮಿಗಳಿಗೆ ಅಗತ್ಯವಿರುವ ಸಾಮಗ್ರಿಗಳನ್ನೇ ನಿಷೇಧಿಸುವುದು ಅವೈಜ್ಞಾನಿಕ ಎಂದು ಅವರು ಕಿಡಿಕಾರಿದ್ದಾರೆ.


