
ಮಗುವಿಗೆ ಬೈದು ಚೆಂಡು ಮುಟ್ಟುಗೋಲು ಹಾಕಿಕೊಳ್ಳುವುದು ಆತ್ಮಹತ್ಯೆಗೆ ಪ್ರಚೋದನೆಯಲ್ಲ: ಕರ್ನಾಟಕ ಹೈಕೋರ್ಟ್
ಅಂಗಡಿಯ ಗ್ಲಾಸ್ ಒಡೆದಿದ್ದಕ್ಕೆ ಮಗುವೊಂದರ ವೊಲಿಬಾಲ್ ವಾಪಸ್ ನೀಡದೆ, ತಂದೆಯನ್ನು ಕರೆತರುವಂತೆ ಹೇಳಿದ್ದು ಐಪಿಸಿ ಸೆಕ್ಷನ್ 305 ಮತ್ತು 107 ರ ಅಡಿಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ಎನಿಸುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ. ಬಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ಇಬ್ಬರು ಅಂಗಡಿ ಮಾಲೀಕರನ್ನು ಖುಲಾಸೆಗೊಳಿಸಿದ್ದ ವಿಚಾರಣಾ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಮೇಲ್ಮನವಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿ ಹೆಚ್.ಪಿ. ಸಂದೇಶ್ ಹಾಗೂ ನ್ಯಾಯಮೂರ್ತಿ ಬಿ. ಪ್ರಮೋದ್ ಅವರಿದ್ದ ವಿಭಾಗೀಯ ಪೀಠವು ಈ ಮಹತ್ವದ ತೀರ್ಪು ನೀಡಿದೆ.
2019 ರ ಫೆಬ್ರವರಿಯಲ್ಲಿ ಬಾಲಕ ಕಿರಣ್ ತನ್ನ ಮನೆಯ ಬಳಿ ವೊಲಿಬಾಲ್ ಆಡುತ್ತಿದ್ದಾಗ ಚೆಂಡು ತರಕಾರಿ/ಮಳಿಗೆಯೊಂದರ ಗ್ಲಾಸ್ಗೆ ಬಿದ್ದು ಒಡೆದುಹೋಗಿತ್ತು. ಈ ವೇಳೆ ಅಂಗಡಿಯವರು ಮಗುವಿಗೆ ಬೈದು ಚೆಂಡನ್ನು ವಾಪಸ್ ನೀಡದೆ, ತಂದೆಯನ್ನು ಕರೆದುಕೊಂಡು ಬರುವಂತೆ ಹೇಳಿದ್ದರೆನ್ನಲಾಗಿದೆ. ಇದರಿಂದ ಮನನೊಂದ ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದ. ವಿಚಾರಣಾ ನ್ಯಾಯಾಲಯವು ಆರೋಪಿಗಳನ್ನು ಖುಲಾಸೆಗೊಳಿಸಿತ್ತು. ಇದನ್ನು ಬಾಲಕನ ತಂದೆ ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದರು.
ಮೇಲ್ಮನವಿಯನ್ನು ವಜಾಗೊಳಿಸಿದ ಹೈಕೋರ್ಟ್, ಬಾಲಕ ಆತ್ಮಹತ್ಯೆ ಮಾಡಿಕೊಳ್ಳಲು ಆರೋಪಿಗಳು ನೇರವಾಗಿ ಪ್ರಚೋದನೆ ನೀಡಿದ್ದಾರೆ ಅಥವಾ ಕುಮ್ಮಕ್ಕು ಕೊಟ್ಟಿದ್ದಾರೆ ಎಂಬುದಕ್ಕೆ ಸೂಕ್ತ ಪುರಾವೆಗಳಿಲ್ಲ ಎಂದು ಹೇಳಿದೆ. ಆಸ್ತಿ ನಷ್ಟಕ್ಕೆ ಪೋಷಕರನ್ನು ಕರೆತರುವಂತೆ ಹೇಳುವುದು ಅಥವಾ ಸಾಮಾನ್ಯ ಬೈಗುಳವು ಕ್ರಿಮಿನಲ್ ಪ್ರಚೋದನೆಯ ವ್ಯಾಪ್ತಿಗೆ ಬರುವುದಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.


