
ನರಗುಂದದಲ್ಲಿ ಅಪಘಾತ: ಶಿಕ್ಷಕರ ದಿನಾಚರಣೆ ಮುಗಿಸಿ ಹಿಂತಿರುಗುತ್ತಿದ್ದ 6 ವಿದ್ಯಾರ್ಥಿಗಳಿಗೆ ಗಾಯ
ಗದಗ ಜಿಲ್ಲೆಯ ನರಗುಂದ ತಾಲೂಕಿನಲ್ಲಿ ಶನಿವಾರ ನಡೆದ ರಸ್ತೆ ಅಪಘಾತದಲ್ಲಿ ಆರು ಜನ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ನರಗುಂದ ಪಟ್ಟಣದ ರೋಟರಿ ಶಾಲೆಯಲ್ಲಿ ಆಯೋಜಿಸಲಾಗಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಸ್ವಗ್ರಾಮ ಭೈರನಹಟ್ಟಿಗೆ ಹಿಂತಿರುಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿಯ ಪುಟ್ಟರಾಜ ಗವಾಯಿ ವೃತ್ತದ ಬಳಿ ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದ ವಾಹನ ನಿಯಂತ್ರಣ ತಪ್ಪಿ ರಸ್ತೆ ವಿಭಾಜಕಕ್ಕೆ (ಡಿವೈಡರ್) ಡಿಕ್ಕಿ ಹೊಡೆದಿದೆ.
ನರಗುಂದ ಪೊಲೀಸರ ಮಾಹಿತಿ ಪ್ರಕಾರ, ಚಾಲಕ ಗೌಡೇಶ ಹುಟಗಿ ವಾಹನದ ಮೇಲಿನ ನಿಯಂತ್ರಣ ಕಳೆದುಕೊಂಡಿದ್ದರಿಂದ ಈ ಅಪಘಾತ ನಡೆದಿದೆ. ಘಟನೆ ತಿಳಿಯುತ್ತಿದ್ದಂತೆ ಸ್ಥಳೀಯರು ಧಾವಿಸಿ ಗಾಯಗೊಂಡ ಮಕ್ಕಳನ್ನು ರಕ್ಷಿಸಿ ಆಸ್ಪತ್ರೆಗೆ ಸೇರಿಸಲು ನೆರವಾದರು.
ಗಾಯಗೊಂಡವರ ಪೈಕಿ 14 ವರ್ಷದ ಅಭಿಷೇಕ ಗೌಡ ಮತ್ತು ಪ್ರಜ್ವಲ್ ಗೌಡ ಎಂಬ ಇಬ್ಬರು ವಿದ್ಯಾರ್ಥಿಗಳಿಗೆ ತೀವ್ರ ಪೆಟ್ಟಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕೆಎಮ್ಸಿ-ಆರ್ಐ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ ವಿದ್ಯಾರ್ಥಿಗಳಾದ ಶಿವು (15), ಮುದ್ದು ಪರಶುರಾಮ (10), ಸೌಮ್ಯ (14) ಮತ್ತು ಗುರುನಾಥ್ (13) ಅವರನ್ನು ನರಗುಂದದ ಸ್ಥಳೀಯ ಆಸ್ಪತ್ರೆಯಲ್ಲಿ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಎಲ್ಲ ವಿದ್ಯಾರ್ಥಿಗಳು ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.


