
ನವಲಗುಂದದಲ್ಲಿ 'ರನ್ ಫಾರ್ ಹೆಲ್ದಿ ನವಲಗುಂದ' ಮ್ಯಾರಥಾನ್: 46 ಯುವ ಸಂಘಗಳ ರಚನೆಗೆ ಶಾಸಕ ಕೋನರಡ್ಡಿ ಘೋಷಣೆ
ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣದ ಮಾಡೆಲ್ ಹೈಸ್ಕೂಲ್ ಮೈದಾನದಲ್ಲಿ 'ರನ್ ಫಾರ್ ಹೆಲ್ದಿ ನವಲಗುಂದ 2026' ಮ್ಯಾರಥಾನ್ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು. ನವಲಗುಂದ ತಾಲೂಕಿನ ಖನ್ನೂರ ಗ್ರಾಮದ ಆರ್.ವಿ.ಎಸ್. ಇಂಟರನ್ಯಾಷನಲ್ ಪಬ್ಲಿಕ್ ಶಾಲೆ ಆಯೋಜಿಸಿದ್ದ ಈ ಓಟದ ಸ್ಪರ್ಧೆಯು ಸ್ಥಳೀಯ ಯುವಕರು ಹಾಗೂ ಸಾರ್ವಜನಿಕರಲ್ಲಿ ಆರೋಗ್ಯ, ಫಿಟ್ನೆಸ್, ರಸ್ತೆ ಸುರಕ್ಷತೆ ಮತ್ತು ಸಾಮಾಜಿಕ ಹೊಣೆಗಾರಿಕೆಯ ಜಾಗೃತಿ ಮೂಡಿಸುವ ಗುರಿ ಹೊಂದಿತ್ತು. ತಾಲೂಕಿನ ವಿವಿಧ ಗ್ರಾಮಗಳ ನೂರಾರು ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು 7 ಕಿಮೀ ಮ್ಯಾರಥಾನ್ನಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನವಲಗುಂದ ಶಾಸಕ ಎನ್.ಹೆಚ್. ಕೋನರಡ್ಡಿ, ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಆರೋಗ್ಯ ಕಾರ್ಯಕ್ರಮಗಳ ಅಗತ್ಯವನ್ನು ಪ್ರತಿಪಾದಿಸಿದರು. ಇದೇ ಸಂದರ್ಭದಲ್ಲಿ ಯುವಜನರ ಸಬಲೀಕರಣಕ್ಕಾಗಿ ಕ್ಷೇತ್ರ ವ್ಯಾಪ್ತಿಯಲ್ಲಿ 46 'ಭಾರತ ಜೋಡೋ ಯುವ ಸಂಘ'ಗಳನ್ನು ರಚಿಸಲಾಗುವುದು ಎಂದು ತಿಳಿಸಿದರು. ಪ್ರತಿಯೊಂದು ಯುವ ಸಂಘಕ್ಕೆ ತಲಾ 10 ಲಕ್ಷ ರೂಪಾಯಿ ಅನುದಾನ ನೀಡಲಾಗುವುದು ಎಂದು ಶಾಸಕರು ಘೋಷಿಸಿದರು. ಈ ನಿರ್ಧಾರವು ನವಲಗುಂದ ತಾಲೂಕಿನ ಕ್ರೀಡೆ, ಸಮಾಜ ಸೇವೆ ಹಾಗೂ ಯುವಕರ ಸವಾಲುಗಳನ್ನು ಪರಿಹರಿಸಲು ಹೊಸ ಚೈತನ್ಯ ನೀಡಲಿದೆ.


