
ನಿಡಗುಂದಿ ತಾಲೂಕಿನ ಗೊಳಸಂಗಿಯಲ್ಲಿ ಗ್ಯಾಸ್ ಕಟರ್ನಿಂದ ಕೆನರಾ ಬ್ಯಾಂಕ್ ಎಟಿಎಂ ಕನ್ನ: ₹19 ಲಕ್ಷ ದೋಚಿ ಪರಾರಿ
ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಗೊಳಸಂಗಿ ಗ್ರಾಮದಲ್ಲಿ ತಡರಾತ್ರಿ ಮುಸುಕುಧಾರಿ ಕಳ್ಳರು ಕೆನರಾ ಬ್ಯಾಂಕ್ ಎಟಿಎಂ ಯಂತ್ರಕ್ಕೆ ಗ್ಯಾಸ್ ಕಟರ್ನಿಂದ ಕನ್ನ ಹಾಕಿ ಬರೋಬ್ಬರಿ ₹19.29 ಲಕ್ಷ ನಗದು ದೋಚಿ ಪರಾರಿಯಾಗಿದ್ದಾರೆ. ಕತ್ತಲಲ್ಲಿ ಬಂದ ದುಷ್ಕರ್ಮಿಗಳು ಶಟರ್ ಕೊರೆದು ಎಟಿಎಂ ಕೇಂದ್ರದೊಳಗೆ ಪ್ರವೇಶಿಸಿ, ಗ್ಯಾಸ್ ಕಟರ್ ಬಳಸಿ ಯಂತ್ರವನ್ನು ತುಂಡರಿಸಿ ಅದರಲ್ಲಿದ್ದ ಹಣದೊಂದಿಗೆ ಸ್ಥಳದಿಂದ ಪರಾರಿಯಾಗಿದ್ದಾರೆ.
ಮರುದಿನ ಬೆಳಗ್ಗೆ ಘಟನೆ ಬೆಳಕಿಗೆ ಬರುತ್ತಿದ್ದಂತೆ, ನಿಡಗುಂದಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಶರಣಗೌಡ ಗೌಡರ ನೇತೃತ್ವದ ಪೊಲೀಸ್ ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬ್ಯಾಂಕ್ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಮಾಹಿತಿ ಸಂಗ್ರಹಿಸಲಾಗಿದ್ದು, ಎಟಿಎಂ ಯಂತ್ರದಲ್ಲಿದ್ದ ₹19.29 ಲಕ್ಷ ಕಳವಾಗಿರುವುದನ್ನು ಬ್ಯಾಂಕ್ ಸಿಬ್ಬಂದಿ ಖಚಿತಪಡಿಸಿದ್ದಾರೆ.
ಈ ಕುರಿತು ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಟಿಎಂ ಹಾಗೂ ಸುತ್ತಮುತ್ತಲಿನ ಕಟ್ಟಡಗಳ ಸಿಸಿಟಿವಿ ಕ್ಯಾಮೆರಾ ಫೂಟೇಜ್ಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಗ್ಯಾಸ್ ಕಟರ್ ಬಳಕೆಯಲ್ಲಿ ಪರಿಣತಿ ಹೊಂದಿರುವ ಸಂಘಟಿತ ಅಪರಾಧಿಗಳ ತಂಡವೇ ಈ ಕೃತ್ಯ ಎಸಗಿರಬಹುದು ಎಂದು ಪೊಲೀಸರು ಶಂಕಿಸಿದ್ದು, ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದಾರೆ.
ಗೊಳಸಂಗಿ ಗ್ರಾಮದಲ್ಲಿ ನಡೆದ ಈ ಹೈಟೆಕ್ ದರೋಡೆ ನಿಡಗುಂದಿ ತಾಲೂಕಿನ ಸಾರ್ವಜನಿಕರು ಹಾಗೂ ವ್ಯಾಪಾರಿಗಳಲ್ಲಿ ತೀವ್ರ ಆತಂಕ ಮೂಡಿಸಿದೆ. ಗ್ರಾಮೀಣ ಭಾಗದ ಬ್ಯಾಂಕಿಂಗ್ ಕೇಂದ್ರಗಳು ಮತ್ತು ಎಟಿಎಂಗಳಿಗೆ ರಾತ್ರಿ ವೇಳೆ ಕಾವಲುಗಾರರನ್ನು ನೇಮಿಸುವಂತೆ ಹಾಗೂ ಭದ್ರತೆಯನ್ನು ಹೆಚ್ಚಿಸುವಂತೆ ಸ್ಥಳೀಯ ಗ್ರಾಮಸ್ಥರು ಆಗ್ರಹಿಸಿದ್ದಾರೆ.


