
ನಿಪ್ಪಾಣಿ ಬಳಿಯ ತವಂದಿ ಕೊಲೆ ಪ್ರಕರಣ: ಮಹಾರಾಷ್ಟ್ರದ ಇಬ್ಬರು ಆರೋಪಿಗಳ ಬಂಧನ
ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನಲ್ಲಿ ಸಂಭವಿಸಿದ 52 ವರ್ಷದ ವ್ಯಕ್ತಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಇಬ್ಬರು ಯುವಕರನ್ನು ಬೆಳಗಾವಿ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ. ಕೊಲ್ಹಾಪುರ ಜಿಲ್ಲೆಯ ಹೊಳೆ ಹಿಟ್ನಿ ಗ್ರಾಮದ ಮಹಮ್ಮದ್ ಶಂಷೀರ್ ಖಲೀಫ್ ಎಂಬುವರು ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ತವಂದಿ ಗ್ರಾಮದ ಬಳಿಯ ಗುಡ್ಡದಲ್ಲಿ ಹತ್ಯೆಗೀಡಾಗಿದ್ದರು. ಬಂಧಿತ ಆರೋಪಿಗಳನ್ನು 22 ವರ್ಷದ ಯುವರಾಜ್ ವಿರುಪಾಕ್ಷ ಮುನ್ನೋಳಿ ಮತ್ತು 21 ವರ್ಷದ ಸ್ವಪ್ನಿಲ್ ಶಿವಾನಂದ ರಾಂಪುರೆ ಎಂದು ಗುರುತಿಸಲಾಗಿದೆ.
ಪೊಲೀಸ್ ಮಾಹಿತಿಯಂತೆ, ವೈಯಕ್ತಿಕ ದ್ವೇಷ ಹಾಗೂ ಹಳೆಯ ವಿವಾದವೇ ಈ ಕೃತ್ಯಕ್ಕೆ ಕಾರಣವಾಗಿದೆ. ವಿಚಾರಣೆ ನಡೆಸುವ ನೆಪದಲ್ಲಿ ಸಂತ್ರಸ್ತನನ್ನು ತವಂದಿ ಗುಡ್ಡದ ಬಳಿ ಕರೆಸಿಕೊಂಡ ಆರೋಪಿಗಳು, ಮಾತಿಗೆ ಮಾತು ಬೆಳೆದು ಅವರ ಮೇಲೆ ಮಾರಕಾಸ್ತ್ರ ಮತ್ತು ಭಾರವಾದ ಕಲ್ಲಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿ ಪರಾರಿಯಾಗಿದ್ದರು. ಈ ಕುರಿತು ಮೃತರ ಪತ್ನಿ ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರು ನಿಪ್ಪಾಣಿ ವೃತ್ತ ನಿರೀಕ್ಷಕರು ಹಾಗೂ ಗ್ರಾಮೀಣ ಉಪನಿರೀಕ್ಷಕರನ್ನೊಳಗೊಂಡ ವಿಶೇಷ ತನಿಖಾ ತಂಡವನ್ನು ರಚಿಸಿದ್ದರು.
ವಿಶ್ವಾಸಾರ್ಹ ಮಾಹಿತಿ ಆಧರಿಸಿ ಮಹಾರಾಷ್ಟ್ರದ ಪುಣೆಯಲ್ಲಿ ತಲೆಮರೆಸಿಕೊಂಡಿದ್ದ ಇಬ್ಬರೂ ಆರೋಪಿಗಳನ್ನು ವಿಶೇಷ ಪೊಲೀಸ್ ಪಡೆ ಬಂಧಿಸಿ ನಿಪ್ಪಾಣಿಗೆ ಕರೆತಂದಿದೆ. ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ನಿಪ್ಪಾಣಿ ಗಡಿಭಾಗದಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿರುವ ಪೊಲೀಸ್ ತಂಡದ ಕಾರ್ಯವೈಖರಿಯನ್ನು ಸ್ಥಳೀಯ ನಾಗರಿಕರು ಮೆಚ್ಚಿದ್ದಾರೆ.


