
ನ್ಯಾಯಾಧೀಶರೊಂದಿಗೆ ಅಸಭ್ಯ ವರ್ತನೆ: ವಕೀಲರಿಗೆ 1,000 ಹಣ್ಣಿನ ಗಿಡ ನೆಡುವಂತೆ ಕರ್ನಾಟಕ ಹೈಕೋರ್ಟ್ ಆದೇಶ
ನ್ಯಾಯಾಲಯದ ಕಲಾಪಕ್ಕೆ ಅಡಚಣೆ ಉಂಟುಮಾಡಿ ನ್ಯಾಯಾಧೀಶರೊಂದಿಗೆ ಅಸಭ್ಯವಾಗಿ ವರ್ತಿಸಿದ್ದ ವಕೀಲರೊಬ್ಬರ ವಿರುದ್ಧದ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕ್ರಿಯೆಯನ್ನು ಹಿಂಪಡೆದಿರುವ ಕರ್ನಾಟಕ ಹೈಕೋರ್ಟ್, ಅವರಿಗೆ 1,000 ಹಣ್ಣಿನ ಗಿಡಗಳನ್ನು ನೆಟ್ಟು ಪೋಷಿಸುವಂತೆ ವಿನೂತನ ಶಿಕ್ಷೆ ವಿಧಿಸಿದೆ. ಬಳ್ಳಾರಿಯ ವಕೀಲ ಎಸ್. ರಂಗಸ್ವಾಮಿ ಅವರು ಸಲ್ಲಿಸಿದ ಬೇಷರತ್ ಕ್ಷಮಾಪಣೆಯನ್ನು ಸ್ವೀಕರಿಸಿದ ನ್ಯಾಯಮೂರ್ತಿ ಹಂಚಾಟೆ ಸಂಜೀವಕುಮಾರ್ ಅವರಿದ್ದ ಪೀಠವು ಈ ಪರಿಷ್ಕೃತ ಆದೇಶ ಹೊರಡಿಸಿದೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ಸಷನ್ಸ್ ನ್ಯಾಯಾಲಯದಲ್ಲಿ ತಮ್ಮ ಕಕ್ಷಿದಾರರ ಕೊಲೆ ಪ್ರಕರಣದ ವಿಚಾರಣೆ ವೇಳೆ ವಕೀಲರು ನ್ಯಾಯಾಧೀಶರನ್ನು ಬೆದರಿಸಿ ಕಲಾಪಕ್ಕೆ ಅಡ್ಡಿಪಡಿಸಿದ್ದರು ಎಂದು ಆರೋಪಿಸಲಾಗಿತ್ತು. ಈ ಸಂಬಂಧ ಏಪ್ರಿಲ್ ತಿಂಗಳಲ್ಲಿ ಹೈಕೋರ್ಟ್ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ಮತ್ತು ರಾಜ್ಯ ಬಾರ್ ಕೌನ್ಸಿಲ್ ಮೂಲಕ ಶಿಸ್ತು ಕ್ರಮಕ್ಕೆ ಆದೇಶಿಸಿತ್ತು. ಪ್ರಸ್ತುತ ವಕೀಲರ ಕ್ಷಮಾಪಣೆ ಸ್ವೀಕರಿಸಿರುವ ಕೋರ್ಟ್, ಆ ಕ್ರಿಮಿನಲ್ ನಡಾವಳಿಗಳನ್ನು ಹಿಂಪಡೆದಿದೆಯಾದರೂ ಅವರ ನಡವಳಿಕೆ ಕುರಿತ ಗಂಭೀರ ಟಿಪ್ಪಣಿಗಳನ್ನು ಕಾಯ್ದಿರಿಸಿದೆ.
ಹೊಸ ನಿರ್ದೇಶನದಂತೆ, ವಕೀಲ ರಂಗಸ್ವಾಮಿ ಅವರು ಕೊಪ್ಪಳ ಜಿಲ್ಲೆಯ ಸರ್ಕಾರಿ ಜಮೀನು ಅಥವಾ ಶಾಲೆ-ಕಾಲೇಜುಗಳ ಆವರಣದಲ್ಲಿ 1,000 ಹಣ್ಣಿನ ಸಸಿಗಳನ್ನು ನೆಟ್ಟು, ಅವುಗಳನ್ನು ನಿರ್ವಹಿಸಬೇಕಾಗಿದೆ. ಅಲ್ಲದೆ, ಅಕ್ಟೋಬರ್ 31, 2026 ರೊಳಗೆ ಈ ಕುರಿತು ಅಫಿಡವಿಟ್ ಸಲ್ಲಿಸಬೇಕು ಮತ್ತು ಬಳ್ಳಾರಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ₹1,000 ದಂಡ ಪಾವತಿಸಬೇಕೆಂದು ಹೈಕೋರ್ಟ್ ಆದೇಶಿಸಿದೆ.


