
ಓಂ ಸಾಯಿಪ್ರಕಾಶ್ ನಿರ್ದೇಶನದ 'ಕಾಮನ್ ಮ್ಯಾನ್' ಸೆಪ್ಟೆಂಬರ್ 25 ಕ್ಕೆ ಚಿತ್ರಮಂದಿರಗಳಿಗೆ
ಸ್ಯಾಂಡಲ್ವುಡ್ನ ಹಿರಿಯ ನಿರ್ದೇಶಕ ಓಂ ಸಾಯಿಪ್ರಕಾಶ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ 106ನೇ ಚಲನಚಿತ್ರ 'ಕಾಮನ್ ಮ್ಯಾನ್' 2026ರ ಸೆಪ್ಟೆಂಬರ್ 25 ರಂದು ರಾಜ್ಯಾದ್ಯಂತ ಬೆಳ್ಳಿಪರದೆಗೆ ಬರಲಿದೆ. 'ಕೆರೆಬೇಟೆ' ಚಿತ್ರದ ಮೂಲಕ ಪ್ರಶಂಸೆ ಗಳಿಸಿದ್ದ ಗೌರಿ ಶಂಕರ್ ಎಸ್.ಆರ್.ಜಿ ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದು, ಸೋನಾ ಲದ್ವಾ ಹಾಗೂ ಸಬ್ಬಿ ಸೂರಿ ನಾಯಕಿಯರಾಗಿ ಅಭಿನಯಿಸಿದ್ದಾರೆ.
ಸಾಮಾನ್ಯ ಪ್ರಜೆಯೊಬ್ಬ ಆಕಸ್ಮಿಕವಾಗಿ ಮುಖ್ಯಮಂತ್ರಿ ಪೀಠವೇರಿದಾಗ ಸಮಾಜದಲ್ಲಿ ಎದುರಾಗುವ ಸವಾಲುಗಳು ಮತ್ತು ಆಡಳಿತ ಸುಧಾರಣೆಯ ಸುತ್ತ ಈ ಚಿತ್ರದ ಕಥಾಹಂದರ ಹೆಣೆಯಲಾಗಿದೆ. ಇತ್ತೀಚೆಗೆ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ನಡೆದ ಅದ್ದೂರಿ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಕರ್ನಾಟಕ ವಿಧಾನ ಪರಿಷತ್ ಉಪಸಭಾಪತಿ ಉಮಾಶ್ರೀ, ಹಿರಿಯ ನಟ ರಮೇಶ್ ಭಟ್, ಪ್ರಿಯಾಂಕಾ ಉಪೇಂದ್ರ ಹಾಗೂ ವಿನೋದ್ ಪ್ರಭಾಕರ್ ಭಾಗವಹಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದರು.
ವಿನಯ್ ಚಂದ್ರ ಸಂಗೀತ ಸಂಯೋಜಿಸಿರುವ ಈ ಚಿತ್ರದ ಹಾಡುಗಳಿಗೆ ಕೈಲಾಶ್ ಖೇರ್, ಬಾಬಾ ಸೆಹಗಲ್ ಹಾಗೂ ಚೈತ್ರಾ ಆಚಾರ್ ದನಿಯಾಗಿದ್ದಾರೆ. ಸಮಾಜಮುಖಿ ಸಂದೇಶ ಹಾಗೂ ರಾಜಕೀಯ ಕಥಾಹಂದರ ಹೊಂದಿರುವ ಈ ಸಿನಿಮಾ ಕನ್ನಡಿಗರ ಮನ ತಲುಪಲಿದೆ ಎಂಬ ವಿಶ್ವಾಸವನ್ನು ನಿರ್ಮಾಪಕ ಹಾಗೂ ಖಳನಟ ಎನ್. ನರಸಿಂಹಮೂರ್ತಿ ವ್ಯಕ್ತಪಡಿಸಿದ್ದಾರೆ.


