
ಪತ್ನಿ ಕೊಲೆ ಪ್ರಕರಣ: ಮೈಸೂರಿನ ಅಪರಾಧಿಯ ಮರಣದಂಡನೆ ತಡೆಗೆ ಹೈಕೋರ್ಟ್ ನಿರಾಕರಣೆ
ಆಸ್ತಿ ಮತ್ತು ಹಣಕಾಸಿನ ವಿವಾದದ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯಲ್ಲಿ ಪತ್ನಿಯನ್ನು ಕೊಚ್ಚಿ ಕೊಲೆ ಮಾಡಿದ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ ಅಪರಾಧಿಯ ಜಾಮೀನು ಮತ್ತು ಶಿಕ್ಷೆ ತಡೆ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ. ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಮತ್ತು ನ್ಯಾಯಮೂರ್ತಿ ಬಿ. ಪ್ರಮೋದ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಅರ್ಜಿದಾರ ಮಹೇಶ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ವಜಾಗೊಳಿಸಿದ್ದು, ವಿಚಾರಣಾ ನ್ಯಾಯಾಲಯದ ತೀರ್ಪಿಗೆ ಬಲವಾದ ಸಾಕ್ಷ್ಯಾಧಾರಗಳಿವೆ ಎಂದು ಸ್ಪಷ್ಟಪಡಿಸಿದೆ.
ಪ್ರಕರಣದ ಹಿನ್ನೆಲೆಯಂತೆ, ಜೂಜು ಮತ್ತು ಸಾಲದ ಸುಳಿಗೆ ಸಿಲುಕಿದ್ದ ಆರೋಪಿಯು ಕುಟುಂಬದ ನಿರ್ವಹಣೆಯ ಜವಾಬ್ದಾರಿಯನ್ನು ಪತ್ನಿಯ ಮೇಲೆಯೇ ಹಾಕಿದ್ದನು. ಅಲ್ಲದೆ, ರಸ್ತೆ ಅಪಘಾತದಲ್ಲಿ ಮೃತಪಟ್ಟ ಪತ್ನಿಯ ಸಹೋದರನ ಪರಿಹಾರದ ಹಣವನ್ನು ತನಗೆ ನೀಡುವಂತೆ ಆಕೆಯ ಮೇಲೆ ಒತ್ತಡ ಹೇರುತ್ತಿದ್ದನು. ಕುಟುಂಬದ ಆಸ್ತಿಯನ್ನು ಮಾರಾಟ ಮಾಡಲು ಪತ್ನಿ ವಿರೋಧ ವ್ಯಕ್ತಪಡಿಸಿದ್ದೇ ಕೊಲೆಗೆ ಮುಖ್ಯ ಕಾರಣವಾಗಿತ್ತು. ಪತ್ನಿ ಬಸ್ನಿಂದ ಇಳಿಯುತ್ತಿದ್ದಂತೆ ಆರೋಪಿಯು ಮಚ್ಚಿನಿಂದ ಆಕೆಯ ಮೇಲೆ ಹಲ್ಲೆ ನಡೆಸಿ ಭೀಕರವಾಗಿ ಕೊಲೆ ಮಾಡಿದ್ದನು.
ಮೈಸೂರು ಸತ್ರ ನ್ಯಾಯಾಲಯವು ಆರೋಪಿಗೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 ರ ಅಡಿಯಲ್ಲಿ ಮರಣದಂಡನೆ ಮತ್ತು ಸೆಕ್ಷನ್ 498ಎ ಅಡಿಯಲ್ಲಿ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ಆರೋಪಿ ಪರ ವಕೀಲರು, ಸನ್ನಿವೇಶ ಆಧಾರಿತ ಸಾಕ್ಷ್ಯಗಳನ್ನು ಹೊರತುಪಡಿಸಿ ನೇರ ಸಾಕ್ಷಿಗಳಿಲ್ಲ ಎಂದು ವಾದಿಸಿದರು. ಆದರೆ, ಸಿಸಿಟಿವಿ ದೃಶ್ಯಾವಳಿಗಳು ಮತ್ತು ಮಹತ್ವದ ಆಧಾರಗಳು ಕೊಲೆಯನ್ನು ಸ್ಪಷ್ಟವಾಗಿ ಸಾಬೀತುಪಡಿಸುತ್ತವೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಜೈಲಿನಲ್ಲಿ ಅಪರಾಧಿಯ ನಡವಳಿಕೆಯ ಕುರಿತು ವರದಿ ನೀಡುವಂತೆ ನಿರ್ದೇಶಿಸಿರುವ ಪೀಠವು, ಮುಖ್ಯ ಮೇಲ್ಮನವಿಯ ವಿಚಾರಣೆಯನ್ನು ಅಕ್ಟೋಬರ್ 5 ಕ್ಕೆ ಮುಂದೂಡಿದೆ.


